ಬ್ರಹ್ಮಾಂಡದಲ್ಲಿ – ಒಂದು ಕಣ ಭೂಮಿ

ವಿಶ್ವ ಅಥವಾ ಬ್ರಹ್ಮಾಂಡ ಎನ್ನುವುದು ಊಹೆ ಮಾಡಿಕೊಳ್ಳಲಾರದಷ್ಟು ಅದ್ಭುತವಾದದ್ದು. ಕತ್ತಲ ರಾತ್ರಿ ಮನೆಯ ಮಾಡಿನ ಮೇಲೆ ಮಲಗಿಕೊಂಡು ಆಕಾಶದ ಕಡೆಗೆ ನೋಡುತ್ತಾ ಹೋಗಿ. ಪ್ರಶಾಂತ ಆಕಾಶದಲ್ಲಿ ಅನಂತ ಸಂಖ್ಯೆಯ ನಕ್ಷತ್ರಗಳು ದೂರದೂರದಲ್ಲಿ ಮಿನುಗುತ್ತಿರುತ್ತವೆ. ಕಣ್ಣುಗಳನ್ನು ಸಣ್ಣದು ಮಾಡಿಕೊಂಡು ಸೂಕ್ಷ್ಮವಾಗಿ ನೋಡುತ್ತಾ ಲೆಕ್ಕ ಹಾಕುತ್ತಾ ಹೋಗಿ. ದೂರದರ್ಶಕಗಳಲ್ಲಿ ನೋಡಿದರೆ ಇನ್ನೂ ಅದ್ಭುತ ನಕ್ಷತ್ರ ಲೋಕವನ್ನೇ ನೋಡಬಹುದು. ಕತ್ತಲ ಗರ್ಭದಲ್ಲಿ ಇನ್ನಷ್ಟು ಮತ್ತಷ್ಟು ಸಣ್ಣದಾಗಿ ಬೆಳಕಿನ ಕಣಗಳು ಹೊಳೆಯುತ್ತಿರುತ್ತವೆ. ಒಟ್ಟಿನಲ್ಲಿ ನೀವು ಲೆಕ್ಕ ಹಾಕಲಾರದಷ್ಟು ಸಂಖ್ಯೆಯ ನಕ್ಷತ್ರಗಳು. ತಿಂಗಳು, ವರ್ಷಗಟ್ಟಲೇ ಲೆಕ್ಕ ಹಾಕಿದರೂ ನಿಮ್ಮ ಲೆಕ್ಕಕ್ಕೆ ದೊರಕುವುದಿಲ್ಲ. ಇದುವೇ ವಿಶ್ವ ಅಥವಾ ಬ್ರಹ್ಮಾಂಡ. 

ಬ್ರಹ್ಮಾಂಡದ ಸೃಷ್ಟಿ :

ಸುಮಾರು 1500 ಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡ ತನ್ನ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುವ ಒಂದು ದಿನ ಆಕಾಶದಲ್ಲಿ ಬಿಗ್‌ಬ್ಯಾಂಗ್ (ಮಹಾಘಂಟೆ) ಸ್ಫೋಟಗೊಂಡಿತು. ಹೀಗೆ ಸ್ಫೋಟಗೊಂಡ ಕಾಲದಲ್ಲಿ ಬ್ರಹ್ಮಾಂಡದಲ್ಲಿದ್ದ ಮೂಲ ವಸ್ತುಗಳೆಂದರೆ 4ರ3 ಭಾಗದಷ್ಟು ಜಲಜನಕ, 4ರ1 ಭಾಗದಷ್ಟು ಹೀಲಿಯಂ, ಹೀಲಿಯಂ ಜೊತೆಗೆ ಶೇಕಡ 1 ಭಾಗದಷ್ಟು ಟೆಂಟಾಲಿಯಂ ಮತ್ತಿತರ ಅಪರೂಪ ಧಾತುಗಳು ಇದ್ದವು. ಬ್ರಹ್ಮಾಂಡದ ಸೃಷ್ಟಿಯಲ್ಲಿ ಪ್ರೋಟಾನ್, ನ್ಯೂಟ್ರಾನ್ ಮತ್ತು ಇಲೆಕ್ಟ್ರಾನ್ ಅಣುಗಳಿದ್ದವು. ಮಹಾಘಂಟೆಯ ಅನಿಲ ರಾಶಿ ದಶದಿಕ್ಕುಗಳಲ್ಲಿ ಹರಡುತ್ತಾಹೋಯಿತು., ಇನ್ನೂ ಹೋಗುತ್ತಲೇ ಇದೆ. ಮುಂದೆ ಈ ಅನಿಲ ರಾಶಿ ಸಾವಿರಾರು ಆಕಾಶಗಂಗೆ, ನಕ್ಷತ್ರಮಂಡಲಗಳಾಗಿ, ಧೂಮುಕೇತುಗಳಾಗಿ, ಉಲ್ಕೆಗಳಾಗಿ, ಕ್ಷುದ್ರಗ್ರಹಗಳಾಗಿ, ಗ್ರಹ-ಉಪಗ್ರಹಗಳಾಗಿ ಮಾರ್ಪಟ್ಟವು. 

ಹೀಗೆ ಹರಡಿಕೊಂಡ ಬ್ರಹ್ಮಾಂಡದ ಉದ್ದಗಲ ಇದುವರೆಗೂ ಯಾವ ವಿಜ್ಞಾನಿಯ ಲೆಕ್ಕಕ್ಕೂ ದೊರಕಿಲ್ಲ. ನಮ್ಮ ಭೂಮಿಯಿಂದ ಹತ್ತಿರ ಇರುವ ಪ್ರಾಕ್ಷ್ಝಿಮಾ ಸೆಂಚೂರೈ ನಕ್ಷತ್ರದ ಬೆಳಕು ಭೂಮಿಗೆ ತಲುಪಲು 4.243 ಜ್ಯೋತಿರ್ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಬೆಳಕಿನ ವೇಗ ಒಂದು ಸೆಕೆಂಡಿಗೆ ಮೂರು ಲಕ್ಷ ಕಿಮೀ. ವೇಗದಲ್ಲಿ ಧಾವಿಸುತ್ತದೆ. ಅದೇ ವೇಗದಲ್ಲಿ ಬೆಳಕು ಒಂದು ವರ್ಷ ಸಾಗಿದರೆ ಅದನ್ನು ಒಂದು ಜ್ಯೋತಿರ್ವರ್ಷ ಎನ್ನುತ್ತಾರೆ. ನಕ್ಷತ್ರಗಳ ದೂರ ಅಥವಾ ಬ್ರಹ್ಮಾಂಡದ ವಿಸ್ತಾರವನ್ನು ವಿಜ್ಞಾನಿಗಳು ಊಹಿಸಿಕೊಳ್ಳುವುದು ಕೂಡ ಒಂದು ಸವಾಲಾಗಿದೆ. ಅಷ್ಟೇ ಅಲ್ಲ ಈಗ ಕೇಳಿ ಬರುತ್ತಿರುವ ಇನ್ನೊಂದು ಸ್ಫೋಟಕ ವಿಷಯವೆಂದರೆ ಬ್ರಹ್ಮಾಂಡ ಕೇವಲ ಒಂದಲ್ಲ. ವ್ಯೋಮದಲ್ಲಿ ನೂರಾರು ಬ್ರಹ್ಮಾಂಡಗಳಿವೆಯಂತೆ.   

 1500 ಕೋಟಿ ವರ್ಷಗಳ ಹಿಂದೆ ಮಹಾಘಂಟೆ ಸ್ಫೋಟಗೊಂಡು ಬ್ರಹ್ಮಾಂಡ ಸೃಷ್ಟಿಯಾಯಿತು ಸರಿ. ಅದಕ್ಕೂ ಮುಂಚೆ ಬ್ರಹ್ಮಾಂಡ ಇರಲಿಲ್ಲವೇ? ಹೌದು ಇರಲೇಬೇಕು! ಅಂದರೆ ಅದಕ್ಕೂ ಮುಂಚೆ ಹತ್ತಾರು, ನೂರಾರು ಮಹಾಘಂಟೆಗಳು ಸ್ಫೋಟಗೊಂಡವೇ? ಸ್ಫೋಟಗೊಂಡಿರಲೇಬೇಕು! 1500 ಕೋಟಿ ವರ್ಷಗಳ ಹಿಂದಿನ ಸ್ಫೋಟದ ಬಗ್ಗೆಯೇ ಅರ್ಥವಾಗದ ನಮಗೆ ಇನ್ನು ಅದರ ಹಿಂದಿನ ಬಿಗ್‌ಬ್ಯಾಂಗ್ ಸ್ಫೋಟಗಳ ಬಗ್ಗೆ ತಿಳಿಯುವುದಾರೂ ಹೇಗೆ? ಸಮಯ ಮತ್ತು ವ್ಯೋಮ (ಟೈಮ್ ಆಂಡ್ ಸ್ಪೇಸ್) ವಿಜ್ಞಾನಿಗಳಿಗೆ ಇನ್ನೂ ಬಿಡಿಸಲಾಗದ ದೊಡ್ಡ ಕಗ್ಗಾಂಟಿಗಿಯೇ ಉಳಿದುಕೊಂಡಿದೆ.

ಬ್ರಹ್ಮಾಂಡದ ಒಂದು ಕಣವಾದ ಭೂಮಿಯಲ್ಲಿನ ಮೂಲ ವಸ್ತುಗಳಾದ ಜಲಜನಕ ಮತ್ತು ಹೀಲಿಯಂ ಕಾಲಾಂತರದಲ್ಲಿ ನೂರಾರು ಧಾತುಗಳಾಗಿ ಮಾರ್ಪಟ್ಟವು. ಆಮ್ಲಜನಕ ಮತ್ತು ಜಲಜನಕ ಒಂದುಗೂಡಿ ಮೋಡಕಟ್ಟಿ ಮಳೆ ಸುರಿದು ಸಮುದ್ರಗಳು ಸೃಷ್ಟಿಯಾದವು. ಭೂಗರ್ಭದಿಂದ ಜ್ವಾಲಾಮುಖಿಗಳ ಮೂಲಕ ಹೊರಚಿಮ್ಮಿದ ಶಿಲಾರಾಶಿ ಕಲ್ಲುಗಳಾಗಿ – ಮಣ್ಣಾಗಿ ಮಾರ್ಪಟ್ಟಿತು. ನೀರು ಮತ್ತು ಖನಿಜ ಧಾತುಗಳು ಆಹಾರದ ಮೂಲಕ ಸಸ್ಯೆ ಮತ್ತು ಪ್ರಾಣಿಗಳ ದೇಹ ಸೇರುತ್ತದೆ. ಭೂಮಿಯ ಮೇಲಿರುವ 70 ಭಾಗದಷ್ಟು ನೀರು ಮತ್ತು 30 ಭಾಗದಷ್ಟು ಕಲ್ಲು-ಮಣ್ಣಿನಲ್ಲಿರುವ ಧಾತುಗಳು ಮನುಷ್ಯನ ದೇಹದಲ್ಲಿರುವುದು ನೈಸರ್ಗಿಕ ಚಮತ್ಕಾರವೆ ಸರಿ. ಇದನ್ನು ನಮ್ಮ ಪೂರ್ವಿಕರು ಪಂಚಭೂತಗಳು ಎಂದಿದ್ದಾರೆ. ಆದರೆ ಪಂಚ ಭೂತಗಳು ಎನ್ನುವುದಕ್ಕಿಂತ ಒಂದೇ ಭೂತ ಎನ್ನುವುದೇ ಸರಿ. ಏಕೆಂದರೆ? ಎಲ್ಲಾ ಭೂತಗಳಿಗೂ ಮೂಲ ಒಂದೇ, ಮಹಾಘಂಟೆ ಸ್ಪೋಟ. ಪಂಚ ಭೂತಗಳೆಂದರೆ ಆಕಾಶ, ಭೂಮಿ, ಗಾಳಿ, ಬೆಳಕು ಮತ್ತು ನೀರು. ಆಕಾಶ ಮತ್ತು ಬೆಳಕನ್ನು ಬಿಟ್ಟರೆ ಉಳಿದ ಮೂರು ಭೂಮಿಗೆ ಸಂಬಂಧ ಪಟ್ಟವು. ಆಕಾಶ ಎನ್ನುವುದು ಇಲ್ಲವೇ ಇಲ್ಲ. ಅಥವಾ ಎಲ್ಲವೂ ಆಕಾಶವೇ?. 

ಇರುವುದೊಂದೇ ಭೂಮಿ :

ಈಗ ನಮಗೆ ತಿಳಿದಿರುವ, ನಾವು ಬದುಕುತ್ತಿರುವ ಭೂಮಿಯ ಬಗ್ಗೆ ಸ್ವಲ್ಪ ಯೋಚಿಸೋಣ. ವಿಜ್ಞಾನಿಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಬ್ರಹ್ಮಾಂಡದಲ್ಲಿ ಇನ್ನೊಂದು ಭೂಮಿಯನ್ನು (ಜೀವಕೋಟಿ ಇರುವ) ಗುರುತಿಸಲು ಸಾಧ್ಯವಾಗಲಿಲ್ಲ. ಮಹಾಘಂಟೆಯ ಸ್ಫೋಟದ ನಂತರ ಅನಿಲ ರಾಶಿ ಕಾಲಾಂತರದಲ್ಲಿ ಮೊದಲಿಗೆ ಆಕಾಶಗಂಗೆಗಳಾಗಿ ರೂಪುಗೊಂಡಿತು. ನಮ್ಮ ಸೂರ್ಯ(ಮಂಡಲ) ಸುಮಾರು 800 ಕೋಟಿ ವರ್ಷಗಳ ಹಿಂದೆ ನಿಶ್ಚಲವಾಗಿ ಕಾಣಿಸಿಕೊಂಡಿತು. ಸೂರ್ಯನಿಂದ ಪ್ರತ್ಯೇಕಗೊಂಡ ಭೂಮಿ 465 ಕೋಟಿ ವರ್ಷಗಳ ಆಸುಪಾಸು ಗಟ್ಟಿಯಾಗುತ್ತಾ ಬಂದಿತು. ಸುಮಾರು 350 – 400 ಕೋಟಿ ವರ್ಷಗಳ ನಡುವೆ ಭೂಮಿಗೆ ಒಂದು ದೊಡ್ಡ ಉಲ್ಕೆ ಬಡಿದ ಕಾರಣ ಪೃಥ್ವಿಯ ಗರ್ಭದಿಂದ ಚಂದ್ರ ಹೊರಬಿದ್ದ ಎನ್ನುವುದು ವಿಜ್ಞಾನಿಗಳ ಊಹೆ. ವಿಶ್ವ ಒಂದು ಸೆಕೆಂಡಿಗೆ 74.2 ಕಿಮೀ. ವೇಗದಲ್ಲಿ ಹರಡಿಕೊಳ್ಳುತ್ತಿದ್ದರೆ, ಆಕಾಶಗಂಗೆ ಒಂದು ಸೆಕೆಂಡಿಗೆ 600 ಕಿಮೀ. ವೇಗದಲ್ಲಿ ಧಾವಿಸುತ್ತಿವೆ. ಸೂರ್ಯನು ಒಂದು ಸೆಕೆಂಡಿಗೆ 220 ಕಿಮೀ. ವೇಗದಲ್ಲಿ ನಾವಿರುವ ಆಕಾಶ ಗಂಗೆಯ ಕೇಂದ್ರಬಿಂದುವನ್ನು ಸುತ್ತುತ್ತಿದ್ದರೆ, ಭೂಮಿ ಸೂರ್ಯನನ್ನು ಒಂದು ಸೆಕೆಂಡಿಗೆ 30 ಕಿಮೀ. ವೇಗದಲ್ಲಿ ಪ್ರದಕ್ಷಿಣೆ ಹಾಕುತ್ತಿದೆ. ಪ್ರಸ್ತುತ ಮನುಷ್ಯನಿಗೆ ವಿಶ್ವದ ಬಗ್ಗೆ ಗೊತ್ತಿರುವುದು ಕೇವಲ ಶೇಕಡ 4 ರಷ್ಟು ಮಾತ್ರ.

ಭೂಮಿಯ ವಯಸ್ಸು 465 ಕೋಟಿ ವರ್ಷಗಳು. ಭೂಮಿ 26 ಸಾವಿರ ವರ್ಷಗಳಿಗೆ ಒಮ್ಮೆ ಮರುಹುಟ್ಟು ಪಡೆಯುತ್ತದೆ ಅಥವಾ (ಪ್ರಾಣಿಗಳ ನಾಶ ಅಥವಾ ಹೊಸ ಜೀವಿಗಳ ಸೃಷ್ಟಿ) ಹೊಸ ಯುಗ ಪ್ರಾರಂಭವಾಗುತ್ತದೆ ಎನ್ನುವುದು ವಿಜ್ಞಾನಿಗಳ ಒಂದು ಲೆಕ್ಕಾಚಾರ. ಭೂಮಿಯ ಮೇಲೆ ಹುಟ್ಟುವ ಪ್ರತಿ ಪ್ರಾಣಿ, ಗಿಡಮರಗಳಿಗೂ ನಿಖರವಾದ ಸರಾಸರಿ ವಯಸ್ಸು ಇರುತ್ತದೆ. ಹಾಗೆಯೇ ನಮ್ಮ ಸುತ್ತಮುತ್ತಲಿರುವ ಕಲ್ಲು – ಬೆಟ್ಟಗುಡ್ಡಗಳಿಗೂ ನಿಖರವಾದ ವಯಸ್ಸು ಇರುತ್ತದೆ. ಅಂದರೆ ಭೂಮಿಯ ಮೇಲಿರುವ ಪರ್ವತಗಳ(ಶಿಲೆ) ವಯಸ್ಸಿನ ಮೂಲಕವೇ ಭೂಮಿಯ ವಯಸ್ಸುನ್ನು ಭೂವಿಜ್ಞಾನಿಗಳು ಅಳೆದಿದ್ದಾರೆ. 

ನಿರಂತರ ಜಲಜನಕ ಮತ್ತು ಹೀಲಿಯಂ ಅನಿಲದಿಂದ ಉರಿಯುತ್ತಿರು ನಕ್ಷತ್ರಗಳು ಕೋಟ್ಯಾಂತರ ವರ್ಷಗಳಲ್ಲಿ ಉರಿದೂ ಉರಿದೂ ಮಣ್ಣಿನ ಚೆಂಡುಗಳಾಗಿ ಗುರುತ್ವಾಕರ್ಷಣೆ ಕಳೆದುಕೊಂಡು ಕೃಷ್ಣ ರಂಧ್ರಗಳ ಒಳಗೆ ಸೇರಿಹೋಗುತ್ತವೆ. ವಿಶ್ವದಲ್ಲಿ ಮಾನವನ ಕಣ್ಣಿಗೆ ಗೋಚರಿಸದೆ ಇರುವ ಕಪ್ಪು ಕೃಷ್ಣರಂಧ್ರಗಳ ಬ್ರಹ್ಮಾಂಡವೇ ಶೇಕಡ 95 ಭಾಗ ತುಂಬಿಕೊಂಡಿದೆ. ಈ ಕೃಷ್ಣ ರಂಧ್ರಗಳು ಮುಂದೊಮ್ಮೆ ಮಹಾಸ್ಫೋಟಗಳಾಗಿ ಹೊರಹೊಮ್ಮುತ್ತವೆ. ಅಂದರೆ ಮತ್ತೆ 1500 ಕೋಟಿ ವರ್ಷಗಳ ನಂತರ! ಎಲ್ಲವೂ ಕಾಲಚಕ್ರದಲ್ಲಿ ಮರು ಹುಟ್ಟು ಪಡೆಯುತ್ತವೆ. ಮುದಿಯಾದ ನಕ್ಷತ್ರಗಳು ಕೆಂಪಾಗಿದ್ದರೆ, ಎಳೆ ನಕ್ಷತ್ರಗಳು ನೀಲಿಯಾಗಿ ಕಾಣಿಸುತ್ತವೆ. ಇನ್ನು ಎಳೆಯ ನಕ್ಷತ್ರಗಳು ಬಿಳುಪಾಗಿರುತ್ತವೆ. ನಮ್ಮ ಸೂರ್ಯ ಈಗ ಮಧ್ಯ ವಯಸ್ಸಿನವನಾಗಿದ್ದು ಅವನು ಮುದಿಯನಾಗಲು ಇನ್ನೂ 100 ಕೋಟಿ ವರುಷಗಳು ಉರಿಯಬೇಕಿದೆ. ಆಗ ಸೂರ್ಯನೂ ಸಹ ತನಗೆ ಹತ್ತಿರದಲ್ಲಿರುವ ಕಪ್ಪು ರಂಧ್ರದ ಒಳಕ್ಕೆ ಹೇಳಹೆಸರಿಲ್ಲದೆ ತಣ್ಣಗೆ ಸೇರಿಹೋಗುತ್ತಾನೆ. ನಮ್ಮ ಸೂರ್ಯ ದೇವನಿಗೆ ಈ ಗತಿಯಾದರೆ ಬ್ರಹ್ಮಾಂಡದಲ್ಲಿ ಒಂದು ಕಣವಾದ ಭೂಮಿಯ ಗತಿ ಏನು? 

ವಿಜ್ಞಾನಿಗಳ ಒಂದು ಕಲ್ಪನೆಯಂತೆ ಸೂರ್ಯನಿಗೆ ಹತ್ತಿರದಲ್ಲಿರುವ ಬುಧ ಗ್ರಹ ಮೊದಲಿಗೆ ಸೂರ್ಯನ ಗುರುತ್ವಾಕರ್ಷಣೆಗೆ ಸಿಲುಕಿ ಉರಿದುಹೋಗಲಿದೆ, ಅನಂತರ ವೀನಸ್ ಸರದಿ. ಸೂರ್ಯನಿಗೆ ಮೂರನೆ ಹತ್ತಿರದ ಗ್ರಹವೆಂದರೆ ಭೂಮಿ. ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತಾ ಸುತ್ತುತ್ತಾ ಸೂರ್ಯನ ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಲುಕಿ ಒಂದು ದಿನ ಬೂದಿಯಾಗಿ ಹೋಗುತ್ತದೆ. ಹೀಗೆ ಎಲ್ಲಿವೂ ಎಲ್ಲಿಂದ ಬಂದವೋ ಅಲ್ಲಿಗೇ ಕಾಲದ ಚಕ್ರಕ್ಕೆ ಸಿಲುಕಿ ಮತ್ತೆ ಅಲ್ಲಿಗೆ ತಲಪುವುದು ಸೃಷ್ಟಿಯ ನಿಯಮ. ಒಂದೇ ಒಂದು ಸಮಾಧಾನದ ವಿಷಯವೆಂದರೆ ಇದೆಲ್ಲಾ ನಡೆಯುವುದು ಲಕ್ಷಾಂತರ ಅಥವಾ ಕೋಟ್ಯಾಂತರ ವರ್ಷಗಳಲ್ಲಿ ಎನ್ನುವುದು. ಆದರೆ ಮಾನವನು ಈಗಾಗಲೆ ಭೂಮಿಯಲ್ಲಿರುವ ಎಲ್ಲಾ ರೀತಿಯ ನೈಸರ್ಗಿಕ ಸಂಪತ್ತನ್ನೂ ಲೂಟಿ ಮಾಡುತ್ತ ಬಹಳ ಹತ್ತಿರದಲ್ಲೇ ತನ್ನ ಆವಸಾನವನ್ನು ನಿರ್ಮಿಸಿಕೊಳ್ಳುತ್ತಿದ್ದಾನೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter