ನೀರ ಮೇಲೆ ಮಲಗಿದವನ ವೃತ್ತಾಂತ..!

ಆ ಮನಿ ಗ್ವಾಡೀ ಮ್ಯಾಲ ಹುರಮಂಜಿನ ಕೈ ಅಲ್ಲಲ್ಲಿ ಹಲ್ಲ ಕಿಸ್ತಂಗ ಮೂಡಿದ್ವು. ಕುಂಬಿ ಮ್ಯಾಲ ನಾಕೂ ನಿಟ್ಟಿನೊಳಗ ಸುತ್ತಲೂ ಹಸರ, ಕೆಂಪು, ಹಳದೀ ಬಣ್ಣದ ಸಣ್ಣ ಸಣ್ಣ ಮಾಳಾ ಲೈಟು ಇಳಿಬಿಟ್ಟಿರುವದಿತ್ತು. ಮನೆ ಮುಂದ ಪೈಸಾಗಿ ಶಾಮಿಯಾನಾ ಹಾಕಿಸಿದ್ದರು. ಶಾಮಿಯಾನದ ಸುತ್ತಲೂ ಮಾವಿನ ತೊಳಲು… ತೆಂಗಿನ ಗರಿ ಬಿಗದಿದ್ದರು. ಸಿಂದಗಿಯ ಜಲಗೇರಿ ಜಯಮ್ಮಳ ಮನಿ ಅನ್ನೂದು ಜನಜಾತ್ರಿ ಆಗಿತ್ತು. ಮನಿತುಂಬಾ ಮಂದಿ ಮಕ್ಕಳು. ಬೀಗರು ಬಿಜ್ಜರು ತುಂಬಿ ಕಿರ್ರೋ ಅಂತಿತ್ತು. ಅಂಗಳ, ಪಡಸಾಲಿ, ಗಗ್ಗರಗಟ್ಟಿ, ಮಾಳಗಿ ಎಲ್ಲಾ ತುಂಬಿ ಸಾಲಲಾರದ್ದಕ್ಕ ಪರಿಚಯಸ್ಥರ ಮನಿಗಿ ಮಲಗಲಾಕ ಕಳಸೋ ಮಟ್ಟಿಗೆ ಜನಾ ಸೇರಿದ್ದರು. ಹೇಳೀ ಕೇಳೀ ಅದು ಮದುವಿ ಮನಿ. ಜಯಮ್ಮಳ ಕಡಿ ಮಗ ಈರಣ್ಣನ ಮದುವಿ. ತಪ್ಪಸಲಾಕ ಬರೂದಿಲ್ಲ. ಎಟ್ಟೇ ಆಗಲಿ ಗಂಡ ಸತ್ತ ಹೆಣಮಗಳು ಅದ್ಯಾಂಗ ಒಬ್ಬಳೇ ನಿಭಾಯಸ್ತಾಳ ಸ್ವಲ್ಪ ಆಸರ ಆಗಬೇಕು ಅಂತ ಲೆಕ್ಕಾ ಹಾಕಿ ಹತ್ತಿರದ ಸಂಬಂಧಿಗಳೆಲ್ಲಾ ಒಂದು ವಾರ ಮೊದಲೇ ಬಂದು ಸೇರಿದ್ದಿತ್ತು. ಜಯಮ್ಮಗ ಸುತ್ತ ನಾಕು ಹಳ್ಳಿಯೊಳಗ ಸಂಬಂಧಿಗಳು ಇದ್ದರು. ಇದ್ದವರೆಲ್ಲಾ ಈ ಪರಿ ಬಂದೇ ಬರ್ತಾರಂತ ಅಕಿಗಿ ಮೊದಲೇ ಗೊತ್ತಿದ್ದಿದ್ದರಿಂದಲೇ ತೆಕ್ಕಿಗಟ್ಟಲೇ ಸಜ್ಜಿರೊಟ್ಟಿ, ಮಣಗಟ್ಟಲೇ ಶೇಂಗಾ ಮತ್ತ ಅಗಸೀ ಹಿಂಡಿ ಕುಟ್ಟೀಸಿ, ಲಟ್ಟಾ ಗಡಗಿಯೊಳಗ ಹುಳಬಾನ ಮುಗುಚಿ ಇಟ್ಟಿದ್ದಳು. ಎಷ್ಟು ಬೇಕಾದಷ್ಟು ಮಂದಿ ಬಂದರೂ ಕಪ್ಪಸೂವಂಗ ನಾಕೈದು ಚೀಲ ಚುರುಮರಿ ಚೂಡಾ, ಬುಂದೆ ಉಂಡಿ ಮಾಡಿಸಿದ್ದಳು. ಜಯಮ್ಮಳ  ಹೊಟ್ಟೀಲೇ ಮೂರು ಹೆಣ್ಣು ಒಂದು ಗಂಡು. ಅಕಿ ಗಂಡ ಚನಬಸು ಮೂರೂ ಹೆಣ್ಣು ಮಕ್ಕಳ ಲಗ್ನ ಮಾಡಿ ಕಣ್ಣ ಮುಚ್ಚಿದ್ದ. ಈಗ ಲಗ್ನ ಆಗ್ತೀರೋ ಈರಣ್ಣ ಅವರಪ್ಪ ಸತ್ತಾಗ ಬಾಳ ಸಣ್ಣದು. ಅಲ್ಲಿಂದ ಇಲ್ಲೀಮಟ ಅವನ ಸಾಲಿ, ಸಮದ, ನೌಕರಿ ಎಲ್ಲಾದಕೂ ಜಯಮ್ಮಳೇ ಗುದಮುರಗಿ ಹಾಕಿದ್ದಿತ್ತು. ತಾ ಹೆಣ್ಣ ಹೆಂಗಸ ಅಂತ ಸುಮ್ಮ ಕೂಡೂ ಪೈಕಿ ಅಕಿ ಅಲ್ಲ. ‘ಗಂಡ  ಸತ್ತಿಂದ ಇಕಿದೇ ಕಾರಬಾರ ಜೋರ್ ಆಗೈತಿ’ ಅಂತ ಓಣ್ಯಾಗಿನ ಮಂದಿ ಆಡಿಕೊಂಡರೂ ಜಯಮ್ಮ ಅದ್ಯಾವದೂ ತನಗ ಕೇಳಸಲಿಲ್ಲ ಅನ್ನೂವಂಗ ತನ್ನ ಪಾಡಿಗಿ ತಾ ಇರೂವಕ್ಕಿ. ಮಗಾ ಹೈಸ್ಕೂಲ್ ಮಾಸ್ತರ ಆಗಿಂದ ಅದೇ ಓಣ್ಯಾಗಿನ ಮಂದಿ ‘ಜಯಮ್ಮ ಅನಕೊಂಡಿದ್ದು ಸಾಧಿಸೇ ಬಿಟ್ಟಳು’ ಅಂದಾಗಲೂ ಅಕಿ ಉಬ್ಬಿರಲಿಲ್ಲ. ಇಂಥಾ ಕಟಿಬಿಟಿ ಜಯಮ್ಮಗ ಮಗನ ಲಗ್ನ ಅನ್ನೂದು ಒಂಥರಾ ಚಾಲೆಂಜ್ ಆಗಿತ್ತು. ಚುಲೋ ಮನಿತನದ ಕನ್ಯೆ ಸಿಗೂದೇ ವಜ್ಜಿ ಆಗಿರೋ ಕಾಲದೊಳಗ ಮಗ ಈರಣ್ಣ ಹುಡುಗಿ ಹಂಗಿರಬೇಕು.. ಹಿಂಗಿರಬೇಕು ಅಂತ ಕಂಡಿಶನ್ ಬ್ಯಾರೇ ಹಾಕಾಕ ಶುರು ಮಾಡಿದ್ದ. ‘ನಮ್ಮ ಮದುವಿಯೊಳಗ ನಿಮ್ಮ ಅಪ್ಪ ಮುಖ ಎತ್ತಿ ಸೈತ ನನ್ನನ್ನ ನೋಡಿರಲಿಲ್ಲ ನಾವೆಲ್ಲಾ ಹಂಗ ಹಿರೇರು ಹೇಳಿದ್ದಕ ಎರಡು ಮಾತು ಆಡದೇ ಕುತುಗಿ ಕೊಟ್ಟಿದ್ದಿವಿ’ ಅಂದಾಗಲೂ ಈರಣ್ಣ ‘ನಿಮ್ಮ ಕಾಲ ಬ್ಯಾರೆ, ನಮ್ಮ ಕಾಲ ಬ್ಯಾರೆ’ ಅಂತ ತಂದೇ ಖರೆ ಮಾಡಿದ್ದ. ಅಂತೂ ಇಂತೂ ಬಾಗೇವಾಡಿ ಗೌಡರ ಮನಿತನದ ಹುಡಗಿನ್ನ ಒಪಗೊಂಡಿದ್ದ.

ಜಯಮ್ಮಳ ಮನಿ ಅಂಗಳದಾಗ ದೊಡ್ಡೂ ಒಂದೆರಡು ನೀರಿನ ಬ್ಯಾರಲ್ ಇಟ್ಟಿದ್ದರು. ಬರೂ ಮಂದಿಗಿ ಕೈಕಾಲ ತೊಳಕಾಳೂ ಬೇಕು ಹಂಗೇ ಬಯಲಕಡಿಗಿ ಹೋಗಾಕೂ ಬೇಕು ಅಂತ ಲೆಕ್ಕಾ ಹಾಕಿ ಅದರೊಳಗ ಎಂಟತ್ತು ಪ್ಲಾಸ್ಟಿಕ್ ನೀರಿನ ತಂಬಗಿ ಇಟ್ಟಿದ್ದರು. ಲಗ್ನಕ ಬಂದ ಮಂದಿ ಗಳಿಗೊಬ್ಬರು ಚರಗೀ ತುಂಬಕೊಂಡು ಬಯಲಕಡಿಗಿ ನಡೀತಿದ್ದರು. ಮನಿ ಒಳಗ ಇರೋ ಪಾಯಿಖಾನಿ ಬರೀ ಹೆಂಗಸರ ಪಾಲಾಗಿತ್ತು. ಪಾಳಿ ಪ್ರಕಾರ ಎಲ್ಲಾರ ಜಳಕ ಮುಗೀಬೇಕಂದ್ರ ಹೆಚ್ಚೂ ಕಮ್ಮಿ ಹತ್ತು ಹೊಡೀತಿತ್ತು. ಅದರಲ್ಲೂ ಕೆಲವರು ಬಾಳ ಸದಗ ಮತ್ತ ಸಾವರಿಸುವವರಿದ್ದರು. ಅವರದು ಮುಗಿಯೂಮಟ ಜಯಮ್ಮಗ ಸಮಾಧಾನ ಇರ್ತಿರಲಿಲ್ಲ. ಮನಿ ತುಂಬ ಓಡ್ಯಾಡಕೊಂತ ಬಂದಿರೋ ಸಂಬಂಧಿಗಳಿಗೆಲ್ಲಾ ನಾಸ್ಟಾ ಆಯ್ತೊ ಇಲ್ಲೋ ಅಂತ ವಿಚಾರಿಸತ್ತಿದ್ದಳು. ಜಯಮ್ಮಳ ಮೂರೂ ಹೆಣ್ಣು ಮಕ್ಕಳು ಆ ಗಳಗಿಯೊಳಗ ಬಾಳ ಆಸರ ಆಗಿದ್ದರು. ಮುಕ್ಕಾಲು ಭಾಗ ಕೆಲಸಾ ಅವರೇ ಎಲ್ಲಾ ನೋಡಕೋತ್ತಿದ್ದರು. 

ಈರಣ್ಣಗ ಗಟ್ಟಿ ಮಾಡಿರೋ ಹುಡುಗಿ ಬಸವನ ಬಾಗೇವಾಡಿದು ಹಿಂಗಾಗಿ ಎರಡೂ ಕಡಿಯವರಿಗೆ ಮದುವಿ ಅನುಕೂಲ ಆಗಲೆಂತ ದೇವರ ಹಿಪ್ಪರಗಿಯ ಮಲ್ಲಯ್ಯನ ಗುಡಿಯೊಳಗ ಲಗ್ನ ಇಟಗೊಂಡಿದ್ದರು. ಲಗ್ನದ ದಿನ ಸನ್ಯಾಕ ಬಂದಂಗ ಜಯಮ್ಮಗ ಕೈ ಆಡಲಾರದಂಗ ಆಗಿತ್ತು. ‘ನನಗಂತೂ ಕೈನೇ ಆಡಾಕತ್ತಿಲ್ಲ, ಹೊತ್ತ ಹೊಂಟರ ಲಗ್ನ’ ಅಂತ ಬಂದ ಬೀಗರ ಮುಂದ ಅಕಿ ಮತ್ತ ಮತ್ತ ಹೇಳಕೊಂಡಿದ್ದಳು. ಜಯಮ್ಮಳ ಗಂಡ ಚನಬಸು ಇಂಥಾ ವಿಷಯದೊಳಗ ಬಾಳ ಮುಂದಿದ್ದ. ಊರಾಗ ಯಾರದರೇ ಲಗ್ನ ಇದ್ದರ ತಾನೇ ಮುಂದ ನಿಂತು ಮಾಡತಿದ್ದ. ಈಗ ಅದೇ ಚನಬಸುನ ಮಗನ ಲಗ್ನದೊಳಗ ಊರಾಗಿನ ಯಾರೂ ಮುಂದಾಗಿರಲಿಲ್ಲ. ‘ಊರಿಗಿ ಉಪಕಾರ ಮಾಡಬಾರದು ಹೆಣಕ್ಕ ಸಿಂಗಾರ ಮಾಡಬಾರದು ಅನ್ನೂದು ಅದಕ್ಕೇ’ ಅಂತ ಜಯಮ್ಮ ಬೇಸರದಿಂದ ಹೇಳತಿದ್ದಳು. ಯಾರು ಬರಲಿ, ಬಿಡಲಿ ತನಗಂತೂ ಬಿಡಲಾರದ ಕರ್ಮ ಅಂತ ಅಕಿ ಗಟ್ಟಿ ಆಗಿನೇ ಕುಂತಿದ್ದಳು. ಮದುವಿ ದಿನ ಸ್ವತ: ಜಯಮ್ಮಳೇ ಓಣ್ಯಾಗಿನ ಜನರನ್ನ ಲಗ್ನಕ ಕರಿಲಾಕ ಹೋಗಿದ್ದಳು. ಎರಡು ಬಿಟ್ಟು ಮೂರು ಸಾರಿ ಹೇಳದ ಮ್ಯಾಲೂ ಜನಾ ತಯಾರಾಗಿ ಬಂದಿರಲಿಲ್ಲ. ಅವಾಗ ಅಕಿಗಿ ಬಾಳ ಬೇಸರಾಗಿತ್ತು. ‘ಈ ಜನಾ ಅನುವ, ಆಪತ್ತ ಏನೂ ನೋಡವರಲ್ಲ, ತಮ್ಮದೇ ಆದ್ರ ಹಿಂಗ ಮಾಡತಿದ್ದರನೂ..?’ ಅನ್ಕೊಂತ ಮತ್ತೊಮ್ಮ ಎಲ್ಲರ ಮನಿಗೂ ಹೋಗಿ ‘ಟ್ರಕ್ ಬಂದು ಬಾಳ ಹೊತ್ತಾಯ್ತು ಬೇಗ ತಯಾರಾಗಿ ಬರ್ರಿ’ ಅಂತ ಕರದು ಬಂದಳು. ಹಿಂಗ ನಾಕೈದು ಬಾರಿ ಕರಸಕೊಂಡು ಹಗೂರಕ ಹೆಜ್ಜಿ ಹಾಕೊಂತ ಜನಾ ಬರಾಕ ಸುರು ಮಾಡಿದರು. ಕೆಲವರಂತೂ ಏನೇನೋ ನೆಪ ಹೇಳಿ ತಮಗ ಬರಾಕ ಆಗಲ್ಲ ಮುಗಸಗೊಂಡು ಬಿಡು ಜಯಕ್ಕ ಅಂತ ಹೇಳದರ, ಮತ್ತ ಕೆಲವರು ‘ಮನ್ಯಾಗ ಯಾರೂ ಇಲ್ಲ ಬರಾಕ ಆಗಂಗಿಲ್ಲ ಇದೊಂದು ನೂರು ರೂಪಾಯಿ ನಮ್ಮ ಮನಿಯವರ ಹೆಸರಲೆ ಬರಸಿಬಿಡು’ ಅಂತ ಹೇಳಿದವರೂ ಇದ್ದರು. ಬಂದವರು ಬಂದರು, ಬಿಟ್ಟವರು ಬಿಟ್ಟರು ತನಗಂತೂ ತಪ್ಪಿದ್ದಲ್ಲ ಅನ್ಕೊಂತ ಜಯಮ್ಮ ಅಡೂಡಿಲೇ ಎಲ್ಲರನ್ನ ಕರಕೊಂಡು ನಡದಳು. ಅರ್ಧಕ್ಕರ್ಧ ಟ್ರಕ್ ಇನ್ನೂ ಖಾಲಿನೇ ಇತ್ತು. ಮುಂಜುಮುಂಜಾನಿಂದ ಜಯಮ್ಮ ಎರಡು ಮೂರು ಸುತ್ತು ಎಲ್ಲಾರಿಗೂ ಕರದು ಬಂದ ಮ್ಯಾಲೂ ಯಾರೂ ಬಂದಿರಲಿಲ್ಲ. ಮತ್ತ ಎರಡು ಸಾರಿ ತಾನೇ ಖುದ್ದಾಗಿ ಹೇಳಿಬಂದ ಮ್ಯಾಲೂ ಅರ್ಧ ಮಂದಿ ಅಷ್ಟೇ ಬಂದಂಗಿತ್ತು. ಇನ್ನ ಮತ್ತ ತಡ ಮಾಡದರ ಮುಹೂರ್ತದ ವ್ಯಾಳೆ ಮೀರತದ ಅಂತ ಲೆಕ್ಕಾ ಹಾಕಿ ಜಯಮ್ಮ ಡ್ರೈವರ ಸಿದ್ರಾಮಗ ಇಶಾರೆ ಮಾಡದಳು.

************************

ದೇವರ ಹಿಪ್ಪರಗಿ ಅಗಸೀ ಬಾಗಿಲದೊಳಗ ಬೀಗರು ಭಾಜಾ ಭಜಂತ್ರಿ ತಗೊಂಡು ಇವರನ್ನ ಬರಮಾಡಿಕೊಳ್ಳಾಕ ಕಾಯಾಕತ್ತಿದ್ದರು. ಇವರು ಟ್ರಕ್ಕಿನಿಂದ ಕೆಳಗ ಇಳಿದದ್ದೇ ಕರಡಿ ಮಜಲಿನ ಸಂಗಣ್ಣ ನಾದ ಹಿಡದು ಬಾರಸಾಕ ಸುರು ಮಾಡದ. ಜಯಮ್ಮಳ ಮುಖದಾಗ ಒಂದು ನಮೂನಿ ಹುರುಪ ಹಣಿಕಿ ಹಾಕತಿತ್ತು. ಕರಡಿ ಮಜಲಿನ ಚಿಟ್ಟಹಲಗಿ ನಾದದ ಹೊಡತಾನೇ ಅಂಥದ್ದು. ಮೆರವಣಿಗಿಯೊಳಗ ಇವರೆಲ್ಲಾ ಮಲ್ಲಯ್ಯನ ಗುಡಿ ಸನ್ಯಾಕ ಬಂದರು. ಹುಡುಗಿ ಕಡಿಯವರು ಪದ್ಧತಿ ಪ್ರಕಾರ ಅಳಿಯನನ್ನ ಭಾಜಾ ಭಜಂತ್ರಿ ಸಮೇತ ಸ್ವಾಗತ ಮಾಡಿದರು. ಗುಡಿ ಒಳಗ ಪೆಂಡಾಲ್ ಹಾಕಿಸಿದ್ದರು. ಈ ಪೆಂಡಾಲ್ ಮದುವಿ ಸೀಜನ್ ಮುಗಿಯೂ ಮಟ ಫ಼ಿಕ್ಸ್ ಆಗಿರತಿತ್ತು. ಮದಿವಿ ಇದ್ದ ದಿವಸ ಅವರಿಗೆ ಬಾಡಿಗೆ ಕೊಟ್ಟರೆ ಆಯ್ತು. ಈ ಮೆರವಣಿಗಿ ಅನ್ನೂದು ಗುಡಿ ಮುಟ್ತಿದ್ದೇ ತಡ ಲಗ್ನದ ಬಂದ ಕೆಲ ಪಟಿಂಗ ಹುಡುಗರು ಗುಂಪಗೂಡಿ ಗುಡಿ ಹಿಂದ ಇಸ್ಪೀಟ್ ಆಡಾಕ ಜಾಗಾ ಕಂಡಕೊಂಡರು. ಅರಿಶಿಣ ಹಚ್ಚೂ ಮುಂದ ಶುರುವಾದ ಇವರ ಆಟ ಲಗ್ನ ಮುಗಿಸಿ ಟ್ರಕ್ ಊರ ಮುಟ್ಟಿದ ಮ್ಯಾಲೂ ಇವರ ಆಟದ ಚಟ ಮುಗದಿರಲಿಲ್ಲ. ಸಿಂದಗಿ ಹಿಪ್ಪರಗಿಯಿಂದ ಬರೀ ಇಪ್ಪತ್ತೇ ಕಿಲೋಮೀಟರ್ ಬಸ್ಸಿಗಿ ಹೋದರಾಯ್ತು ಅನ್ನೋ ಧಿಮಾಕಲ್ಲಿ ಇವರು ಆಡಾಕ  ಕುಳತವರು ಅಕ್ಷತೆ, ಊಟ ಯಾವುದರ ಖಬರೂ ಇಲ್ಲದೇ ಆಡಾಕತ್ತಿದ್ದರು. ಇವರ ಅಪ್ಪದೇರು ಮದುವಿ ಹುಡುಗಗ ತನ್ನ ಹೆಸರಲೇ ನೂರು ರೂಪಾಯಿ ಆಯೇರಿ ಹಾಕು ಅಂದದ್ದನ್ನೂ ಇವರು ಮರತು ಆಡಿದ್ದರು. ಜಯಮ್ಮಳ ದೂರದ ಸಂಬಂಧಿ ಒಬ್ಬಾತ ಆಲಮೇಲದಿಂದ ಬಂದಿದ್ದ. ಸಂಬಂಧ ಹುಡಕತಾ ಹೋದರ ಇಂವಾ ಆಕಿ ಚಿಕ್ಕಪ್ಪನೇ ಆಗಬೇಕು. ಶಿವಶಿವ ಅನ್ಕೊಂತ ಏಳುವ..ಕೂಡುವ ಈ ದರೆಪ್ಪ ಬರೂದು ಯಾರಿಗೂ ಬ್ಯಾಡಾಗಿತ್ತು. ಆದರೂ ಅಂವಾ ಮೂರು ದಿನ ಮೊದಲೇ ಬಂದಿದ್ದ. ಈ ದರೆಪ್ಪಗ ಈಗ ಹೆಚ್ಚೂಕಮ್ಮಿ ನಾಕಿಪ್ಪತ್ತು ವರ್ಷ. ಈಗಲೂ ಪಾಡಾಗಿಯೇ ಇದ್ದ. ಕಟುರ್.. ಕುಟುರ್.. ಅಂತ ಕಟೀ ರೊಟ್ಟೀ ಜಡಿಯವನು. ಚಸ್ಮಾ ಬಂದಿರೋ ಹುಡುಗರನ್ನ ಕರದು ಅವನಿಗಿ ಕಣ್ಣು ಸರಿಯಾಗಿ ಕಾಣದಿದ್ದರೂ ತನಗಿನ್ನೂ ಕಣ್ಣು ನಿಚ್ಚಳವಾಗಿಯೇ ಕಾಣ್ತಾವ ಅಂತಿದ್ದ. ಈ ದರೆಪ್ಪನ ಚಾಳಿ ಬಾಳ ಸುಮಾರಿತ್ತು. ಹಿಂಗಾಗಿನೇ ಅವನ್ನ ಕಂಡ್ರ ಸಾಕು ಆಲಮೇಲದೊಳಗ ಯಾರೂ ಸೇರತಿರಲಿಲ್ಲ. ಕಂಡಕಂಡವರಿಗೆಲ್ಲಾ ಒಂದು ಬೀಡಿ ಕೊಡ್ರಿ ಅನ್ನವನು. ಅಲ್ಲಿದಿಲ್ಲಿ ಇಲ್ಲಿದಲ್ಲಿ ಹೇಳಿ ಬಾಳ ಮಂದಿಗಿ ಜಗಳಾ ಹಚ್ಚಿದ ಕುಖ್ಯಾತಿಯೂ ಇವಂದಿತ್ತು. ದೇಶಾವರಿ ಮಾತಾಡಿ ತಲಿ ಚಿಟ್ ಹಿಡಸಂವ. ಇಂಥಂವ ಬಂದಿದ್ದು ನೋಡಿನೇ ಜಯಮ್ಮ ಅರ್ಧ ಹೈರಾಣಾಗಿದ್ದಳು. ಇದ್ಯಾಕ ಬಂತು ಖೋಡಿ ಅಂತ ಮದುವಿಗಿ ಬಂದ ಜನರೆಲ್ಲಾ ಆಡಕೋತಿದ್ದರು. ಆವಾಗ ಈ ದರೆಪ್ಪ ತನಗ ಕಿವಿ ಕೇಳದಿದ್ದರೂ ಅವರ ಕಡಿ ನೋಡಿ ‘ನನಗ ಬರೀ ಕಣ್ಣ ಅಟ್ಟೇ ಅಲ್ಲ ಕಿವಿನೂ ಕೇಳ್ತಾವ’ ಅಂದದ್ದೇ ಆ ಜನ ಇದು ಬಾಳ ಗಟ್ಟಿ ಮುದುಕ ಕಿವಿ, ಕಣ್ಣ ಇನ್ನೂ ಭೇಷ ಅದಾವಂದ್ರ ಇಂವಾ ಸೆಂಚ್ಯುರಿ ಭಾರಸೂದು ಗ್ಯಾರಂಟಿ ಅಂತ ಆಡಕೋತಿದ್ದರು. 

ಈ ದರೆಪ್ಪ ಬಂದ ದಿನಾನೇ ಜಯಮ್ಮಗ ಬಾಜೂ ಮನಿಯವರ ಜೋಡಿ ಜಗಳಾ ಹಚ್ಚಿದ್ದ. ಅದಕ್ಕ ಕಾರಣ ಏನಂದ್ರ ಮದುವಿಗಿ ಬಂದವರು ಅದರಾಗೂ ಗಂಡಸರು ಎಲ್ಲಾರೂ ಚರಗಿ ತಗೊಂಡು ಬಯಲಕಡಿಗಿ ಹೋಗವರು. ಹಂಗೇ ಈ ದರೆಪ್ಪನೂ ಹೋದ. ಆದರ ಮಬ್ಬ ಆಗಿದ್ದರಿಂದ ಇಂವಾ ಬಾಳ ದೂರ ಹೋಗಲಿಲ್ಲ. ಆಲ್ಲೇ ಮೂರನೇ ಮನಿ ಬಾಜೂ ಇರೋ ಬಯಲು ಜಾಗದೊಳಗ ಹೇತುಬಿಟ್ಟಿದ್ದ. ಇದನ್ನ ಅದೇ ಮನಿಯೊಳಗಿರೋ ಮುದುಕಿ ಒಂದು ಕಿಡಕಿಯೊಳಗಿಂದ ನೋಡತು. ಇಂವಾ ಭೆಷನ್ಯಾಗೆ ಮುಕುಳಿ ತೊಳ್ಯಾಕೂ ಬಿಡದಂಗ ಒದರ್ತಾ ಆ ಮುದುಕಿ ಹೊರಗ ಬಂತು. ಅಕಿ ಬೈಗುಳಗಳ ಹೊಡತಕ್ಕ ದೋತರ ಕೈಯಾಗ ಹಿಡದು ಏಳ್ಕೊಂತ ಬೀಳ್ಕೊಂತ ಮನಿಕಡಿ ಓಡಿದ್ದ ದರೆಪ್ಪಗ ಆ ಮುದುಕಿ ಜಯಮ್ಮಳ ಜೋಡಿ ಜಗಳಕ್ಕ ನಿಲ್ತಾಳ ಅಂತ ಅನಿಸಿರಲಿಲ್ಲ. ಇಂಥಾ ದರೆಪ್ಪ ಮಾಳಗಿ ಮ್ಯಾಲ ಮಲಗ್ತೀನಿ ಅಂತ ಹೇಳಿ ರಾತ್ರಿ ಹಿಂದಿನ ಮನಿಯವರು ಬಟ್ಟೆ ವಗಿಯೋ ಕಲ್ಲಿನ ಮ್ಯಾಲ ಬರ್ರ್ ಅಂತ ಉಚ್ಚೆ ಹೊಯ್ದಿದ್ದ. ಜಯಮ್ಮ ‘ಈದೇನೋಪ ನೀನು’ ಅಂದದ್ದೇ ‘ತಂಗೀ.. ನಾ ಬೇಕಂತ ಮಾಡಿಲ್ಲ ನನಗ ನಿದ್ದಿಗಣ್ಣಿನೊಳಗ ಗೊತ್ತಾಗಂಗಿಲ್ಲ’ ಅಂತ ಹಾರಿಕೆ ಉತ್ತರ ಕೊಟ್ಟಿದ್ದ. ಆಗ ಜಯಮ್ಮಗ ಏನು ಮಾತಾಡಬೇಕಂತ ಗೊತ್ತಾಗಿರಲಿಲ್ಲ. ಮನಿಗಿ ಬಂದ ಮಂದಿ ನಡುವ ಕುಂತು ದೇಶಾವರಿ ಮಾತಾಡೊ ಈ ದರೆಪ್ಪಜ್ಜ ಯಾಕ ಹೀಂಗ ಅನ್ನೂದು ಯಾರಿಗೂ ತಿಳಿಲಾರದಂಗ ಆಗಿತ್ತು. ಕ್ಯಾಕರಸಿ ಎಲ್ಲಿ ಬೇಕಂದರ ಅಲ್ಲಿ ಉಗಳೂದು.. ಮುಕುಳಿ ಮ್ಯಾಲ ಮಾಡಿ ಹೂಸ್ ಬಿಡೂದು.. ಮೂಗಿನೊಳಗಿನ ಕೂದಲಾ ಕಿತ್ತೂದು ಇಂಥಾ ಹತ್ತಾರು ಅರಿಷ್ಟ ಗುಣಗಳ ಅಸಹ್ಯವಾಗಿರೋ ಈ ದರೆಪ್ಪ ಮಾತಿಗಿ ಸುರು ಮಾಡಿದರ ಸಾಕು ತಾ ಇನ್ನೂ ಇಪ್ಪತ್ತು ವರ್ಷ ಬದುಕೇ ತೀರಂವ ಅಂತಿದ್ದ. ಹಿಂಗೇ ನೂರಿಪ್ಪತ್ತು ವರ್ಷ ಬದುಕೇ ತೀರ್ತೀನಿ’ ಅಂತ ಚೀರಿ ಚೀರಿ ಹೇಳೂಮುಂದ ಜಯಮ್ಮಳ ಕಡಿ ಮಗಳು ಕಸ್ತೂರಿ ‘ಯಾವ ಕರ್ಮಕ್ಕ ನೀನು ನೂರಿಪ್ಪತ್ತು ವರ್ಷ ಬದುಕ್ತಿ..?’ ಅಂತ ಕೇಳಿದ್ದಳು. ಅಕಿ ಹಂಗ ಕೇಳಲಿಕ್ಕೂ ಒಂದು ಕಾರಣಿತ್ತು. ಈ ದರೆಪ್ಪ ಮದುವೆ ಆಗಿ ಹತ್ತು ಮಕ್ಕಳ ತಂದೆಯಾದುದೇನೋ ಹೌದು ಆದರೆ ಒಂದೇ ಒಂದು ದಿನ ದುಡಿದದ್ದಿಲ್ಲ. ಹೆಂಡ್ರು-ಮಕ್ಕಳಿಗೆ ತಂದು ಹಾಕಿದ್ದಿಲ್ಲ. ಹಸಿವಾದೊಡೆ ಮನಿಗೋಗಿ ರೊಟ್ಟಿ ಬುಟ್ಟಿಗೆ ಕೈಹಾಕಿ ಮೂರ್ನಾಲ್ಕು ರೊಟ್ಟಿ ಎಳದು, ಕಟದು ಹೊರಗೆ ಬಿದ್ದರೆ ಮುಗೀತು ಮತ್ತೆ ಹಸಿವಾದಾಗಲಷ್ಟೇ ಮನಿ ನೆನಪು. ಇಡೀ ಊರಿಗೂರೇ ಇವನು ಎಂಥವನು ಅನ್ನೂದು ಗೊತ್ತಿತ್ತು. ಇಂಥಾ ದರೆಪ್ಪ ಆ ಮಲ್ಲಯ್ಯನ ಗುಡಿ ಮುಂದ ಇರೋ ಬೇವಿನ ಗಿಡದ ಕಟ್ಟಿಮ್ಯಾಲ ಕುಳಿತು ಬೀಡಿ ಸೇದಿ ಬುಶ್.. ಬುಶ್.. ಅಂತ ಹೊಗಿ ಬಿಡತಿದ್ದ. ‘ಇಲ್ಯಾಕ ಕುಂತಿ ಅಕ್ಕೀಕಾಳ ಬೀಳೂದರೊಳಗ ಐತಿ ಒಳಗ ಹೋಗು’ ಅಂತ ಹೇಳಿದ್ದಕ ಹಗೂರಕ ಎದ್ದವನು ಗುಡಿ ಒಳಗ ನಡದ. ಅಲ್ಲಿ ಅಕ್ಷತೆಗಾಗಿ ತಯಾರಿ ನಡೆದಿದ್ದವು. ಈ ದರೆಪ್ಪ ಚಪಾತಿ ಮಾಡೂ ಹೆಂಗಸರ ಬಾಜೂ ಖಾಲಿ ಇರೋ ಖುರ್ಚಿಯ ಮೇಲೆ ಮುಕುಳಿಯೂರಿದ. ಕೈಯಲೊಂದು ಬೀಡಿ ಹಿಡಿದು ಜಗ್ಗುತ್ತಾ, ಮೂಗಿನ ಹೊರಳೆಯಿಂದ ಅಪಾರವಾಗಿ ದ್ಯಾನಸ್ಥನಾದಂತೆ ಹೊಗೆ ಬಿಡುತ್ತಲಿದ್ದ. ಚಪಾತಿ ಮಾಡೂ ಹೆಂಗಸರು ಮೂಗು ಮುಚಗೊಂಡರೂ ಇಂವಾ ಹೊಗಿ ಬಿಡೂದು ನಿಲ್ಲಸಿರಲಿಲ್ಲ. ಮದುವೆಗೆ ಬಂದವರೆಲ್ಲಾ ಅಕ್ಷತೆಗಾಗಿ ಕಾದು ಕುಳಿತಿದ್ದರೆ ಈ ದರೆಪ್ಪ ಮಾತ್ರ ಪತ್ತೆದಾರಿ ಕೆಲಸ ಮಾಡುವವನಂತೆ ಅತ್ತಿತ್ತ ಹಾಗೇ ನೋಡುತ್ತಲೇ ಇದ್ದ. ಅಕ್ಷತೆ ಬೀಳುತ್ತಿದ್ದಂತೆ ಜನರೆಲ್ಲಾ ಮಂಟಪದ ಮೇಲೆ ಹತ್ತಿ ತಾವು ತಂದ ಕಾಣಿಕೆಗಳನ್ನು ನೀಡಿ ನವ ದಂಪತಿಗಳಿಗೆ ಶುಭ ಕೋರುತ್ತಿದ್ದರು.

ಬಿಳಿ ಖಾದಿ ಜುಬ್ಬಾ ಧರಿಸಿದ ದಢೂತಿ ಆಸಾಮಿಯೊಬ್ಬಾತ ಗುಡಿಯೊಳಗೆ ಬರಬರನೇ ಬರುತ್ತಿರುವಂತೆ ಅಲ್ಲಿದ್ದವರೆಲ್ಲಾ ‘ಎಮ್.ಎಲ್.ಎ. ಬಸನಿಂಗಪ್ಪ ಬಂದರು’ ಅಂತ ತಮ್ಮ ತಮ್ಮಲ್ಲೇ ಮಾತಾಡುತ್ತಿದ್ದರು. ಇದು ಆ ಬಸಲಿಂಗಪ್ಪನಿಗೆ ಗೊತ್ತಾಗಿ ಆತ ಇನ್ನಷ್ಟು ವಿಶಿಷ್ಟವಾದ ಗತ್ತಿನಲ್ಲಿ ಜನರ ಬದಿಗೆ ಹೊರಳಿ ಎರಡೂ ಕೈಯತ್ತಿ ನಮಸ್ಕರಿಸಿದ. ದೂರದಲ್ಲಿ ಕುಳಿತಿದ್ದ ದರೆಪ್ಪ ಈ ಎಮ್.ಎಲ್.ಎ. ತನಗೇ ನಮಸ್ಕಾರ ಮಾಡಿರಬಹುದು ಅಂದ್ಕೊಂಡು ತನ್ನ ಎರಡೂ ಕೈಗಳನ್ನು ಮೇಲೆತ್ತಿದ. ಬಸನಿಂಗಪ್ಪ ಜಯಮ್ಮಳ ಗಂಡ ಚನಬಸುಗೆ ಅತೀ ಆತ್ಮೀಯ ಹೀಗಾಗಿಯೇ ಆತ ಮದುವೆಗೆ ಬಂದಿರುವದಿತ್ತು. ಎಮ್.ಎಲ್.ಎ. ಸುತ್ತ ಮುತ್ತಲೂ ಹತ್ತಾರು ಬಿಳಿ ಖಾದಿ ಜುಬ್ಬಾಧಾರಿಗಳು ಮುಕರಿದ್ದರು. ಬಸನಿಂಗಪ್ಪ ಏನೇ ಮಾತಾಡಿದರೂ ಅವರೆಲ್ಲಾ ಹಲ್ಲು ಗಿಂಜುತ್ತಿದ್ದರು. ಬಸನಿಂಗಪ್ಪ  ಮದುವೆ ಮಂಟಪದ ಮೇಲೋಗಿ ವಧು-ವರರಿಗೆ ಆಶೀರ್ವದಿಸಿದ. ಹುಡುಗ-ಹುಡುಗಿ ಇಬ್ಬರೂ ಕೃತಾರ್ಥರಾದಂತೆ ಅವನ ಕಾಲಿಗೇ ಬಿದ್ದರು. ಇವನೋ ತನ್ನದೇ ಆದ ಗತ್ತಿನಲ್ಲಿ ತನ್ನ ಪಿ.ಎ.ರಮೇಶನನ್ನ ಕೂಗಿ ತನ್ನ ಕಿಸೆಯಿಂದ ಒಂದು ಐದು ನೂರರ ನೋಟೊಂದನ್ನು ತೆಗೆದು ಅಕ್ಕಪಕ್ಕದ ಎಲ್ಲರಿಗೂ ಕೇಳುವಂತೆ ‘ನನ್ನ ಹೆಸರಲ್ಲಿ ಐದುನೂರು ರೂಪಾಯಿ ಆಯೇರಿ ಬರೆಸು’ ಅಂತ ಹೇಳಿ ಊಟ ಮಾಡದೇ ತನಗಿನ್ನೂ ಮೂರ್ನಾಲ್ಕು ಮದುವೆಗೆ ಹೋಗಬೇಕಾಗಿದೆ ಎನ್ನುತ್ತಲೇ ಮತ್ತೊಮ್ಮೆ ಜನರ ಕಡೆಗೆ ಮುಖ ಮಾಡಿ ನಮಸ್ಕರಿಸಿ ನಡೆದ. ಆತ ಆ ಗುಡಿಯಿಂದ ಹೊರ ಹೋಗುವವರೆಗೂ ಜನರ ಕಣ್ಣುಗಳೆಲ್ಲಾ ಆ ಎಮ್.ಎಲ್.ಎ. ಬಸನಿಂಗಪ್ಪನ ಮೇಲೆಯೇ ನೆಟ್ಟಿದ್ದವು.

‘ಎಲ್ಲರೂ ಊಟ ಮಾಡಿ ಹೋಗಬೇಕು. ಅಡುಗೆ ತಯಾರಿದೆ’ ಎಂದು ಜಯಮ್ಮಳ ಅಳಿಯಂದಿರು ಗುಡಿಯ ಬಾಗಿಲಲ್ಲಿ ನಿಂತು ಹೇಳುತ್ತಿದ್ದರು. ಊಟದ ಪಡಸಾಲೆಯಲ್ಲಿ ಆಗ ವಿಪರೀತ ಗದ್ದಲ. ಹೀಗಾಗುತ್ತದೆ ಎಂದು ದರೆಪ್ಪನಿಗೆ ಮೊದಲೇ ಗೊತ್ತಿತ್ತು ಹಾಗಾಗಿಯೇ ಅವನು ಮೊದಲ ಪಂಕ್ತಿಯಲ್ಲಿಯೇ ಹಾಜರಾಗಿದ್ದ. ಊಟ ಮುಗಿದದ್ದೇ ತಡ ಮತ್ತೆ ತನ್ನ ಪತ್ತೆದಾರಿಕೆಯನ್ನು ಮುಂದುವರೆಸಿಯೇ ಇದ್ದ. ಜಯಮ್ಮ ಅತ್ತಿಂದಿತ್ತ ಓಡಾಡಿ ಬೀಗರಿಗೆ, ಸಂಬಂಧಿಗಳಿಗೆ ಕೊಡಬೇಕಾಗಿರುವ ಸೀರೆಗಳನ್ನು ಹೊಂದಿಸುತ್ತಿದ್ದಳು. ಈಗವಳು ಅರ್ಧದಷ್ಟು ಹಗುರಾಗಿದ್ದಳು. ಮದುವೆಗೆ ಬಂದ ಜನರಲ್ಲಿ ಬಹುತೇಕರು ಬದನೆಕಾಯಿ ಪಲ್ಯೆ ಚುಲೊ ಆಗಿತ್ತು, ಸಾಂಬಾರ ಬಾಳ ಚುಲೊ ಆಗಿತ್ತು, ಅನ್ನ ತುಸು ಮಿಜ್ಜಿ ಆಗಿತ್ತು, ಬುಂದೆ ಉದರ ಆಗಿತ್ತು. ಹಿಂಗ ಬರೀ ಮದುವೆಯ ಅಡುಗೆಯ ಬಗ್ಗೆ ಮಾತಾಡುತ್ತಿದ್ದರೇ ಹೊರತು ವಧು-ವರರ ಬಗ್ಗೆ ಮಾತೇ ಇರಲಿಲ್ಲ. ಆ ಗುಡಿಯ ಮೂಲೆಯಲ್ಲೊಂದು ಹಳೆಯ ಕಾಲದ ಬಾವಿ. ಆ ಬಾವಿಯಲ್ಲಿ ಒಂದಾಳು ನೀರು ಬಿರುಬೇಸಿಗೆಯಲ್ಲೂ ಇತ್ತು. ಅತ್ಯಂತ ಇಕ್ಕಟ್ಟಾದ ಬಾವಿಯದು. ತುಂಬಾ ಆಳವಾಗಿತ್ತು. ಅದರ ನೀರು ಮಾತ್ರ ಕುಡಿಯುವಂತಿರಲಿಲ್ಲ. ಆ ಬಾವಿಯಲ್ಲಿ ಪೂಜೆಯ ಹೂವು, ಪತ್ರಿ, ತೆಂಗಿನಕಾಯಿ, ಹಾರಗಳೇ ತೇಲುತ್ತಿದ್ದವು. ಅದರ ನೀರಿಗೂ ಒಂದು ತರ ವಾಸನೆ ಬಂದಿತ್ತು. ಊರಲ್ಲಿಯ ಎಲ್ಲ  ಬಾವಿಗಳು ಬತ್ತಿದ ಮೇಲೂ ಈ ಬಾವಿಯಲ್ಲಿ ಒಂದಾಳು ನೀರು ಇದ್ದೇ ಇರತೈತಿ ಅನ್ನೋದು ಊರವರ ಮಾತು. ದೇವಸ್ಥಾನದ ಹುಂಡಿಗೆ ಸಾಕಷ್ಟು ದುಡ್ದ ಬರತೈತಿ ಅದನ್ನ ಸ್ವಚ್ಚ ಮಾಡಸಬಾರದಾ..? ಅಂತಿದ್ದರು. ದೇವಸ್ಥಾನದ ಬಾಗಿಲಲ್ಲಿ ಒಂದು ಸಣ್ಣ ಗದ್ದಲ ಸುರುವಾಗಿತ್ತು. ಅದಕ್ಕೆ ಕಾರಣ ಯಾರೋ ಒಬ್ಬರದು ಚಪ್ಪಲಿ ಕಳುವಾಗಿರೋದಿತ್ತು. ಅದು ಹೊಸ ಚಪ್ಪಲಿ ಮೊನ್ನೆ ಮೊನ್ನೆ ಖರೀದಿಸಿದ್ದು ಎಂದು ಕಳೆದುಕೊಂಡವನು ಚೀರಿ ಚೀರಿ ಹೇಳುತ್ತಲೇ ಇದ್ದ. ಜಯಮ್ಮ ಒಂದು ಸಾರಿ ಆ ಗದ್ದಲದ ಕಾರಣ ಏನೆಂದು ತಿಳಿಯಲು ಆ ಜನರ ನಡುವೆ ಬಂದು ‘ಯಾಕ್ರಣ್ಣಾ ಏನಾಯ್ತು..?’ ಅಂತ ಕೇಳಿದ್ದೇ ಚಪ್ಪಲಿ ಕಳೆದುಕೊಂಡವನು ‘ಯಾರೋ ಬದ್ಮಾಸರು ನನ್ನ ಚಪ್ಪಲಿ ಕದ್ದಾರ, ಹೊಸ ಚಪ್ಪಲಿ’ ಅಂತ ಹೇಳ್ತಾ ಇದ್ದಂಗೆ ಜಯಮ್ಮ ದರೆಪ್ಪ ಕುಳತಿರೋ ಖುರ್ಚಿಯ ಕಡೆ ಹೊರಳಿ ನೋಡದಳು. ಖುರ್ಚಿ ಖಾಲಿಯಾಗಿತ್ತು. ಜಯಮ್ಮ ತನ್ನ ಅಳಿಯ ರಾಜೇಶನಿಗೆ ಹೊರಗೆ ಬೇವಿನ ಗಿಡದ ಕೆಳಗೆ ದರೆಪ್ಪಜ್ಜ ಕುಳತಾನೋ ಇಲ್ಲವೋ ನೋಡು ಎಂದಾಗ ರಾಜೇಶ ಓಡಿ ಹೋಗಿ ಬಂದು ‘ಅಲ್ಲಿಯೂ ಇಲ’ ಎಂದಾಗ ಜಯಮ್ಮ ದೀರ್ಘವಾದ ಒಂದು ನಿಟ್ಟುಸಿರನ್ನು ಬಿಟ್ಟು, ಹೆಣ್ಣು ಮಕ್ಕಳ ಊಟ ಆಯ್ತೊ.. ಇಲ್ಲವೋ.. ಅಂತ ವಿಚಾರಿಸಿಕೊಳ್ಳಲಿಕ್ಕೆ ನಡದಳು. ಚಪ್ಪಲಿ ಬಿಡುವ ಜಾಗೆಯಲ್ಲಿ ಇನ್ನೂ ಗದ್ದಲ ಪೂರ್ಣವಾಗಿ ಕಡಿಮೆಯಾಗಿರಲಿಲ್ಲ. ‘ಮದುವೆ ಮನೆಯಲ್ಲಿ ಚಪ್ಪಲಿ ಬಿಡುವಾಗ ಹೀಗೆ ಎರಡನ್ನೂ ಒಂದೇ ಕಡೆ ಬಿಡಬಾರದು ಬೇರೆ ಬೇರೆ ಕಡೆ ಬಿಡಬೇಕು ನನ್ನಂಗೆ’ ಅಂತ ಒಬ್ಬನಂದರೆ ಇನ್ನೊಬ್ಬ ‘ತರೂ ಅವಶ್ಯಕತೆನೇ ಇಲ್ಲ ನನಗ ಹಿಂಗಾಗತೈತಿ ಅಂತ ಗೊತ್ತೈತಿ ಅದ್ಕೇ ಆ ಗೊಬ್ಬರದ ಅಂಗಡಿಯೊಳಗ ಬಿಟ್ಟು ಬಂದೆ’ ಅಂದಾಗ ಮತ್ತೊಬ್ಬ ‘ತಂದರೂ ಹಾಕೊಂಡೇ ಇರಬೇಕು ನಾನು ಊಟಾ ಮಾಡೂವಾಗಲೂ ಅಲ್ಲೇ ಹಿಂದೇ ಇಟ್ಗೊಂಡಿದ್ದೆ’ ಹಿಂಗೆಲ್ಲಾ ಚಪ್ಪಲಿ ಸುಭದ್ರತೆಯ ಬಗ್ಗೆ ಮಾತಾಡೂ ವ್ಯಾಳೆದೊಳಗ ಗುಡಿ ಪೂಜಾರಿ ಸಣ್ಣಲಿಂಗಯ್ಯ ಹೌಹಾರಿ ಓಡಿ ಬಂದು ‘ಬಾವ್ಯಾಗ ಯಾರೋ ಬಿದ್ದಾರ.. ಬಾವ್ಯಾಗ ಯಾರೋ ಬಿದ್ದಾರ’ ಅನ್ಕೊಂತ ಬಂದ. ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿ ನೋಡದರ ಯಾರೋ ಒಬ್ಬ ವಯಸ್ಸಾದ ಮನುಷ್ಯಾ ಮುಖ ಕೆಳಗ ಮಾಡಿ ಮಲಗದಂಗಿತ್ತು. ಬಾವಿ ಸುತ್ತಲೂ ಕಟ್ಟೆ ಇರಲಿಲ್ಲ. ತುಸು ಜೋಲಿ ಹೋದರೂ ಸಾಕು ಸೀದಾ ಒಳಗೇ.. ಬಾವಿ ಮೂಲಿಯೊಳಗ ಒಂದು ಸಣ್ಣ ಮಾಡಿತ್ತು. ಅಲ್ಲಿ ಕೊಡಾ ಸೇದೂ ಹಗ್ಗಾ ಇಡತಿದ್ದರು. ಈಗ ಆ ಜಾಗದೊಳಗ ಯಾರದೋ ಎರಡು ಹರಕ ಸ್ಲೀಪರ ಚಪ್ಪಲಿ ಇಟ್ಟಿದ್ದರು. ಹಂಗ ಇಡಲಾಕ ಹೋದಾಗಲೇ ಕಾಲು ಪಿಸುಕಿ ಜಾರಿ ಬಿದ್ದಿರಬೇಕು ಅನ್ನೂವಂಗ ಕಾಲು ಜಾರಿದ ಗುರುತೂ ಅಲ್ಲಿತ್ತು. ಯಾರು.. ಏನು.. ಅಂತ ಯಾರಿಗೂ ಗೊತ್ತಾಗಲಿಲ್ಲ. ಚಪ್ಪಲಿ ಕಳಕೊಂಡ ಮನುಷ್ಯನಿಗೆ ಆ ಹೆಣದ ಬಾಜೂ ತೇಲತಾ ಇರೋ ಹೊಸ ಚಪ್ಪಲಿ ಮಾತ್ರ ತನ್ನದು ಅನ್ನೋ ಗುರತು ಸಿಕ್ಕು ತನ್ನ ಚಪ್ಪಲಿ ಸಿಕ್ವು ..ತನ್ನ ಚಪ್ಪಲಿ ಸಿಕ್ವು.. ಅಂದ. ಹೆಂಗರೆ ಮಾಡಿ ಆ ಚಪ್ಪಲಿ ತಗೀಬೇಕು ಅನ್ನೋ ಗುಂಗಿನೊಳಗ ಅಂವಾ ಇದ್ದ. ಈ ಹೆಣಾ ತಗಿಯಾಕ ಯಾರು ಬರ್ತಾರ ನೋಡಬೇಕು ಅವನಿಗೇ ಹತ್ತು ರೊಪಾಯಿ ಕೊಟ್ಟು ಹೆಣದ ಜೋಡಿ ಆ ಚಪ್ಪಲಿನೂ ಮ್ಯಾಲ ತಗಸಬೇಕು ಅಂತ ಯೋಚನೆ ಮಾಡೂದರೊಳಗ ಜಯಮ್ಮ ಬಾವಿ ಕಡಿ ಅಡ್ರಾಸಿ ಓಡಿ ಬಂದಳು. ದಿಟ್ಟಿಸಿ ಬೊಕ್ಕ ಬೋರಲಾಗಿ ಮಲಗಿದ ಅ ಹೆಣದ ಬಟ್ಟೆ-ಬರೆ, ಆಕಾರ ನೋಡಿ ಇದು ಬಹುಷಾ ದರೆಪ್ಪನೇ ಇರಬೇಕು ತಾ ಅಂದಕೊಂಡಿದ್ದು ಖರೆನೇ  ಐತಿ. ಇನ್ನೂ ನೂರಾ ಇಪ್ಪತ್ತು ವರ್ಷ ಬದುಕಬೇಕು ಅಂತ ಮಾತಿಗೊಮ್ಮ ಹೊಡಕೊಳ್ಳೊ ಈ ದರೆಪ್ಪಜ್ಜ ಹಿಂಗ ಮಲ್ಲಯ್ಯನ ಗುಡಿಯೊಳಗ ತನ್ನ ಮಗನ ಮುದುವಿ ದಿನ ಹೆಣಾ ಆಗಿದ್ದು ಜಯಮ್ಮಗ ಬಾಳ ತಾಪ ಆದಂಗಿತ್ತು.

************************

ಊರಾಗ ಯಾರರೆ ಬಾವಿಗಿ ಬಿದ್ದರ ಸೀನಪ್ಪ ಬರಲೇಬೇಕು. ಹಂಗಾಗೇ ಅವನ್ನ  ಹೆಣಾ ತಗಿಯೋ ಸೀನಣ್ಣ ಅಂತೇ ಕರೀತಿದ್ದರು. ಇಕಾಡಿದಿಕಾಡಿ ಅವನೂ ಈ ಬಾವಿಯೊಳಗ ಇಳಿಯಾಕ ಹಿಂದ ಮುಂದ ನೋಡತಿದ್ದ. ಯಪ್ಪಾ… ಯಣ್ಣಾ.. ಅಂದುಕೊಂಡು ಸೀನಪ್ಪನ್ನ ಕರಕೊಂಡು ಬರಲಾಯ್ತು. ಅಂವಾ ಅಲ್ಲಿ ನೆರದ ಮಂದಿ ಮುಂದೇ ದಾರೂ ಬಾಟಲಿ ಬೂಚ್ ಒಡದು, ಅದಕ್ಕ ನೀರು ಹಾಕಲಾರದೇ ಗಟಗಟ ಅಂತ ಒಂದೇ ಉಸರಿಗೆ ಸೆಡ್ಡಿ ಒಂದು ಸಾರಿ ಮುಖ ಕಿವುಚಿ, ‘ಈ ಬೋಳಿಮಗಂದು ಬಾವಿ ಬಾಳ ಡೆಂಜರ್ ಅದ. ಇಲ್ಲಿ ಬಿದ್ದಿರೋ ಹೆಣಾ ತಗಿಯೂದು ಅಂದ್ರ ಬಾಳ ಬಿರಿ ಐತಿ’ ಅನ್ಕೊಂತ ಸೊಂಟಕ್ಕ ಹಗ್ಗಾ ಬಿಗದು, ಮ್ಯಾಲ ಗಿರಕೀ ಕಟಗಿಗಿ ಹಗ್ಗ ಕಟ್ಟಿ ಒಳಗ ಇಳದ. ಆ ಗಳಿಗಿಯೊಳಗ ಅಲ್ಲಿ ನೆರದಿರೋ ಜನರ ಎದುರು ಸೀನಪ್ಪ ಹೀರೋ ಆಗಿದ್ದ. ಹೀಂಗ ಹೋಗ್ಯಾನ ಅನ್ನೂದರೊಳಗ ನೀರ ಮುಟ್ಟಿದ್ದ. ಚಪ್ಪಲಿ ಕಳಕೊಂಡವ ‘ಸೀನಣ್ಣ ಆ ಚಪ್ಪಲಿ ತಗೊಂಡು ಬಾ ಹತ್ತು ರೂಪಾಯಿ ಕೊಡ್ತೀನಿ’ ಅಂತ ಜೋರಾಗಿ ಕೂಗತಿದ್ದ. ಸೀನಣ್ಣ ಮ್ಯಾಲ ನೋಡಿ ‘ಆ ಹತ್ತು ರೂಪಾಯ್ದು ನೀನೇ ಹುರಕಡ್ಲಿ ತಿನ್ನು  ಐವತ್ತು ರೂಪಾಯಿ ಕೊಟ್ರೆ ತರ್ತೀನಿ ಇಲ್ಲಾಂದ್ರ ಇಲ್ಲೇ ಬಿದ್ದಿರಲಿ’ ಅಂದ. ಆಗ ಆ ಆಸಾಮಿ ಗಡಬಡಿಸಿ ‘ಆಯ್ತು ಕೊಡ್ತೀನಿ’ ಅಂದ. ಆ ಹೆಣ  ಮತ್ತ ಚಪ್ಪಲಿ ಸಮೇತ ಸೀನಪ್ಪ ಹೊರಗ ಬಂದಿದ್ದ. ಹೌದು ಅಂವಾ ಆಲಮೇಲ ದರೆಪ್ಪನೇ ಆಗಿದ್ದ. ಜಯಮ್ಮಗ ಮದುವಿ ದಿನ ಹಿಂಗ ಆಯ್ತಲ್ಲ..! ಅಂತ ಬಾಳ ಬ್ಯಾಸರ ಆಗಿತ್ತು. ಅವನ ಎದಿ ಮ್ಯಾಲಿನ ಕಿಸೆಯೊಳಗ ಒಂದು ಚೀಟಿ ಇತ್ತು ಅದರೊಳಗ ಆಲಮೇಲದೊಳಗಿನ ಮೂರು ಮಂದಿ ಆಯೇರಿ ಮಾಡಲಿಕ್ಕಂತ ತಲೆಗೆ ಐವತ್ತು ಐವತ್ತು ರೂಪಾಯಿ ಈ ದರೆಪ್ಪನ ಕೈಯಾಗ ಕೊಟ್ಟಿರೋದಿತ್ತು. ದರೆಪ್ಪ ಮದುವೆಗೆ ಬಂದು ಧರೆಗಿಳಿದಂಗ ಆಗಿತ್ತು.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter