ಬೇಂದ್ರೆಯವರು 1936ರವರೆಗೆ ರಚಿಸಿದ ತಮ್ಮ ಆತ್ಮಚರಿತ್ರೆಯ ಕಾವ್ಯರೂಪವನ್ನು ‘ಸಖೀಗೀತ’ ಎನ್ನುತ್ತಾರೆ. ಆದರೆ ಇದು ಸಖಿಯೊಬ್ಬಳ ಆತ್ಮನಿವೇದನೆಯಲ್ಲ. ಬದಲಾಗಿ ಸಖನೊಬ್ಬ ತನ್ನ ಸಖಿಯನ್ನು ಉದ್ದೇಶಿಸಿ ಹೇಳಿದ ಬಾಳ ಬವಣೆಯ ಮಾತು. ಹಾಗೆ ನೋಡಿದರೆ ಇದು ‘ಸಖಗೀತ’ವೇ. ಇಲ್ಲಿರುವುದೆಲ್ಲಾ ಒಂದು ರೀತಿಯ ಸಖನ ಸ್ವಗತ (soliloquy) ನಾಟಕವನ್ನುಳಿದು ಉಳಿದೆಲ್ಲಾ ಸಾಹಿತ್ಯ ಪ್ರಕಾರಗಳು ಒಂದುರೀತಿಯ ಸ್ವಗತಗಳೇ. ಸಖೀಗೀತವೊಂದು ಸಖನ ಸ್ವಗತವಾದರೂ, ಪುರುಷ ಯಾಜಮಾನ್ಯದ ಸಮಾಜವೊಂದರಲ್ಲಿ ಕೇವಲ ‘ಅನ್ನಕೆ ಬಾಳಾಗಿ. ಕಾಮಕೆ ಹೋಳಾಗಿ, ಮಾನಕೆ ಆಳಾಗಿ’ ಹೆಣ್ಣು ಸಾಮಾನ್ಯವಾಗಿ ಬದುಕುತ್ತಿದ್ದಂತಹ ಸಂದರ್ಭದಲ್ಲಿ, ‘ಇಲ್ಲ, ಅಂತಹ ಬಾಳು ಬಾಳಲ್ಲ. ಜೀವ ಜೀವಕೆ ಉದ್ದೀಪನವಾದುದೆ ಜೀವನವು’ ಎಂದು ಹೆಣ್ಣುಗಂಡುಗಳ ನಡುವಿನ ಪಾರಸ್ಪರಿಕತೆಯನ್ನು, ಸಮತೆಯನ್ನು ಒಬ್ಬ ಪುರುಷ ಎತ್ತಿಹಿಡಿಯುವುದು ವಿಶಿಷ್ಟವಾದುದೇ.
ಬೇಂದ್ರೆಯವರು ‘ಸಖೀಗೀತ’ವನ್ನು ರಚಿಸಿದ್ದು 1936ರಲ್ಲಿ. ಹೆಂಡತಿಯಾದವಳಿಗೆ ಹೆಸರೇ ಇಲ್ಲದ ಕಾಲವದು. (ಎ.ಎನ್. ಮೂರ್ತಿರಾಯರ ‘ಹೆಂಡತಿಯ ಹೆಸರು’ ಪ್ರಬಂಧ ನೆನಪಿಗೆ ಬರುತ್ತದೆ). ಆಗ, ಲೇ… ಇವಳೇ.. ಎಂದೋ, ಇದರ ಅಮ್ಮನೆಂದೋ, ಅದರ ಅಮ್ಮನೆಂದೋ ಅವಳು ಹೆಸರುವಾಸಿಯಾಗಿದ್ದಳು. ಗಂಡನ ಜೊತೆಗೆ ವಾಯುವಿಹಾರ ವಿರಲಿ, ಹಗಲು ಹೊತ್ತು ಅಡುಗೆಮನೆಯಿಂದ ನಡುಮನೆಗೆ ಬಂದು ಗಂಡನ ಜೊತೆ ಕಷ್ಟ ಸುಖ ಹಂಚಿಕೊಳ್ಳಲೂ ಸಾಧ್ಯವಿಲ್ಲದ ಕೌಟುಂಬಿಕ ಪರಿಸ್ಥಿತಿ ಅಂದಿನದು. ಅಂತಹ ಕಾಲದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಯನ್ನು, ಕಾವ್ಯತಂತ್ರದ ನೆಪದಲ್ಲಿಯೇ ಆದರೂ ‘ಸಖೀ’ ಎಂದು ಆತ್ಮದ ದನಿಯಿಂದ ಕರೆಯುತ್ತಾರೆ. ಅದರ ಮೂಲಕ ಬದುಕಿನ ಪರಸ್ಪರ ಹೊಂದಾಣಿಕೆಗೆ, ಅನುನಯಕ್ಕೆ ಕರೆಯನ್ನು ಕೊಡುತ್ತಾರೆ. ಬೇಂದ್ರೆಯವರು ‘ಸಖೀಗೀತ’ ಬರೆಯುವ ವೇಳೆಗಾಗಲೇ ಕನ್ನಡ ಸಾಹಿತ್ಯದಲ್ಲಿ ‘ಇಂದಿರೆಯರು’ ಕಾಲಿಟ್ಟು ಬಹಳ ಕಾಲವಾಗಿತ್ತು. ‘ಪ್ರಪಂಚ’ ದಲ್ಲಿ ಆಧುನಿಕತೆಯ ಬಿರುಗಾಳಿ ಬೀಸುತ್ತಿದ್ದರೆ, ‘ಮನೆ’ಯೊಳಗೆ ಸಂಪ್ರದಾಯ ಮೂಗುಬ್ಬಸಪಡುತ್ತಾ ಹೋರಾಡುತ್ತಿದ್ದಂತಹ ಕಾಲದಲ್ಲಿ, ಆಧುನಿಕತೆ ಮತ್ತು ಸಾಂಪ್ರದಾಯಕತೆಯನ್ನು ಕಸಿ ಮಾಡಿ ಹೇಗೆ ಅವುಗಳನ್ನು ತಮ್ಮ ಬರಹಗಳಲ್ಲಿ ಅಂದಿನ ಲೇಖಕರು ನಿಭಾಯಿಸಿದರೆಂಬ ಸಂಗತಿಯನ್ನು ಚರಿತ್ರೆ ಬಲ್ಲದು. ಬೇಂದ್ರೆಯವರ ‘ಸಖೀಗೀತ’ಕ್ಕೆ ಇಂತಹ ಪೂರ್ವಸೂರಿಗಳು ಮಾದರಿಯಾಗಿರಬಹುದು.
ಸಖೀ ಎನ್ನುವ ಶಬ್ದಕ್ಕೆ ‘ಗೆಳತಿ’, ‘ಜೊತೆಗಾತಿ’, ‘ಸಹವರ್ತಿ’ ಎನ್ನುವ ಅರ್ಥವಿದೆ. ನಮ್ಮ ಕೌಟುಂಬಿಕ ಪರಿಕಲ್ಪನೆಯಲ್ಲಿ ಹೆಂಡತಿ ಜೊತೆಗಾತಿಯಾಗಲು ಸಾಧ್ಯವೇ ಇಲ್ಲ. ‘ಸಹಧರ್ಮಿಣಿ’ ಎಂಬಂತಹ ಔದಾರ್ಯದ ಮಾತುಗಳೆಲ್ಲಾ ನಮ್ಮ ಸಂಸ್ಕತಿಯಲ್ಲಿ ತಾತ್ವಿಕವಾಗಿ ಇರಬಹುದು. ಆದರೆ ಆಚರಣೆಯ ನೆಲೆಯಲ್ಲಿ ಆಕೆ ದಾಸಿಯೇ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅಕೆಯದು ಎರಡನೆಯ ದರ್ಜೆ ಮಾತ್ರ. ಆಕೆ ಗಂಡನ ಅನುವರ್ತಿ. ಹಿಂಬಾಲಕಳು ಅಷ್ಟೇ.
ಆದರೆ ‘ಸಖೀ’ ಎಂಬ ಪದವೇ ಅವಳನ್ನು ಸಖನ ಜೊತೆಗೆ ಸಮಪಾತಳಿಯ ಮೇಲೆ ನಿಲ್ಲಿಸುತ್ತದೆ. ಅವಳು ಅವನನ್ನು ಹಿಂಬಾಲಿಸುವವಳಲ್ಲ, ಬದಲಾಗಿ ಅವನ ಜೊತೆ ಜೊತೆಗೆ ಸರಿ ಸಮವಾಗಿ ಹೆಜ್ಜೆ ಹಾಕುವವಳು. ಆದುದರಿಂದಲೇ ಅವಳನ್ನು ಕವಿ ‘ಕುಣಿಯೋಣ ಬಾ’ ಎಂದು ‘ಪ್ರಣಯದೋಲೆಯನೊಂದು ಎದೆವಾತಿನಿಂದೆದೆಗೆ’ ಕರೆ ಕಳಿಸುತ್ತಾರೆ. ಇದು ‘ಒಳಗಿದ್ದ ಪ್ರಕೃತಿಗೆ ಒಳದನಿಯೊಂದು ಅಂತರ್ಮುಖವಾಗಿ’ ಕರೆವ ಕರೆ. (ಹೆಣ್ಣು ಮತ್ತು ಗಂಡಿನ ಅಂಶಗಳು ಎಲ್ಲರಲ್ಲೂ ವಿಭಿನ್ನ ಪರಿಮಾಣಗಳಲ್ಲಿ ಇರುತ್ತವೆ ಎಂಬ ಓಶೋ ಅವರ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು). ಹೆಣ್ಣು ಮತ್ತು ಗಂಡು ಅಖಂಡ ಪ್ರಕೃತಿಯ ಭಾಗಗಳೇ, ಸೃಷ್ಟಿಯ ಘನ ಉದ್ದೇಶಕ್ಕಾಗಿ ಅವು ಎರೆಡಾಗಿ ಒಡೆದಿವೆ ಅಷ್ಟೇ. ಗಂಡಿನೊಳಗೆ ಹೆಣ್ಣು ಇರುವಂತೆ, ಹೆಣ್ಣಿನೊಳಗೆ ಗಂಡೂ ಇದೆ. ಗಂಡು ಇಲ್ಲಿ ತನ್ನೊಳಗಿರುವ ಹೆಣ್ಣಿಗೆ ಒಸಗೆಯನ್ನು ಕಳಿಸುತ್ತಿದ್ದಾನೆ. ಇದು ಒಳಗಿನದಾದ್ದರಿಂದ, ಜಿ.ಎಸ್. ಆಮೂರರು ಹೇಳುವಂತೆ ಇದೊಂದು ಅಂತರ್ಯಾನ.
ಹೆಣ್ಣಿಗೆ ಆತ್ಮವೇ ಇಲ್ಲವೆಂದು ನಂಬಿರುವ ಸಂಸ್ಕತಿಯಲ್ಲಿ ಅವಳು ‘ಆತ್ಮಸಖಿ’ ಯಾಗುವುದು ಒಂದು ವಿಸ್ಮಯ. ಈ ವಿಸ್ಮಯದ ಮೂಸೆಯಿಂದಲೇ ಬೇಂದ್ರೆಯವರ ‘ಸಖೀಗೀತ’ ವನ್ನು ನಾವು ಅರ್ಥೈಸಬೇಕು. ಅದಲ್ಲದೇ ಸ್ತ್ರೀ, ಪುರುಷ ಎಂಬ ವಿಭಜಿತ ಕೋಣೆಯಲ್ಲಿ ಪ್ರತ್ಯೇಕವಾಗಿ ಬಂಧಿಸಿ, ಕವಿತೆ ಹುಟ್ಟಿದ ಕಾಲದಿಂದ ಅದನ್ನು ಬೇರ್ಪಡಿಸಿ ವಿಶ್ಲೇಷಿಸುತ್ತಾ ಹೋದರೆ, ಪರಸ್ಪರ ಆರೋಪ ಪ್ರತ್ಯಾರೋಪಗಳ ಘರ್ಷಣೆಯಲ್ಲಿ ಸ್ತ್ರೀ ಮತ್ತು ಪುರುಷರೀರ್ವರ ಚೈತನ್ಯಗಳೂ ಬಳಲಿಹೋಗುವುದರ ಅಪಾಯವನ್ನು ಮನಗಾಣಬೇಕಾಗಿದೆ. ಇಂದು, ಒಂದು ಅಖಂಡವಾದ ಕಾಣ್ಕೆಗೆ ಇದನ್ನು ಒಳಪಡಿಸುವದರ ಅಗತ್ಯವಿದೆ.
‘ಸಖೀ’ ಭಕ್ತಿಯ ಪ್ರೇಮೋತ್ಕಟವಾದ ಭಾಷೆಕೂಡ ಅಗಿದೆ. ಹೆಂಡತಿಯನ್ನು ಇಂತಹ ಪ್ರೇಮೋತ್ಕಟ ಶಬ್ದದಿಂದ ಸಂಬೋಧಿಸುವುದರ ಮೂಲಕ ಬೇಂದ್ರೆಯವರು ದಾಂಪತ್ಯದ ಪರಿಕಲ್ಪನೆಯನ್ನು ಬೇರೊಂದು ಎತ್ತರಕ್ಕೆ ಒಯ್ದು, ಅದರ ಸಾಂಪ್ರದಾಯಕ ನೆಲೆಯನ್ನು ಮೀರಿದ್ದಾರೆ ಎನ್ನುವುದೇ ಈ ಕವಿತೆಯ ವೈಶಿಷ್ಟ್ಯವಾಗಿದೆ.
ಈ ಸಖ್ಯದ ಆಖ್ಯಾನ ಕಟು ಮತ್ತು ಮಧುರ ಎನ್ನುತ್ತಾರೆ ಕವಿ. ಬದುಕು ಹೂವಿನ ಹಾಸಿಗೆಯೂ ಹೌದು ಮುಳ್ಳುಕಂಟಿಗಳ ದಾರಿಯೂ ಹೌದು. ತಗ್ಗು ದಿಣ್ಣೆಗಳಲ್ಲಿ ಏರಿ ಇಳಿಯಬೇಕಾದರೆ ಗಂಡ ಹೆಂಡತಿ ಇಬ್ಬರೂ ಸಮಾನಾಂತರವಾಗಿ ಚಲಿಸುವುದು ಮುಖ್ಯವಾಗುತ್ತದೆ. ಈ ಚಲನೆಗೆ ಮುಖ್ಯವಾಗಿ ಬೇಕಾಗಿರುವುದು ಒಲುಮೆ. ದಾಂಪತ್ಯವೆಂದರೆ ಕವಿಗೆ, ಒಲುಮೆಯ ಕಿಚ್ಚಿನಲ್ಲಿ ಉಕ್ಕಾಗಿ ಹೊರಬರುವಂತಹದು. ಬದುಕಿನ ಕಾರ್ಪಣ್ಯಗಳಲ್ಲಿ ಗಂಡಹೆಂಡತಿ ಮಾಗುವ ಕ್ರಿಯೆಯೇ ‘ಸಖೀಗೀತ’. ಗೃಹಿಣಿಯಾಗಿ ಬಂದವಳು ಸಖಿಯಾಗಿ ಬೆಳೆದು ಆತ್ಮಸಖಿಯಾಗುತ್ತಾಳೆ. ಡಿ. ಆರ್. ನಾಗರಾಜ ಅವರ ಪ್ರಕಾರ ”ಬೇಂದ್ರೆಯವರಲ್ಲಿ ಕೇಂದ್ರರೂಪಿ ಎಂದು ಕರೆಯಬಹುದಾದ ಫ್ಯಾಲಿಕ್ ಸಂಕೇತವಿಲ್ಲ. ಫ್ಯಾಲಿಕ್ ಎಂದು ಕರೆಯಬಹುದಾದ ರಚನೆಗಳು ಪಿತೃಸರ್ವಾಧಿಕಾರಿ ಸಮಾಜದ ಸೃಷ್ಟಿಯಾದ್ದರಿಂದ ಆ ಆಶಯವನ್ನೇ ಅವು ಮುಂದುವರೆಸುತ್ತವೆ. ಗಂಡಿನ ಲಿಂಗವೆಂಬುದು ದೊಡ್ಡ ಅಧಿಕಾರದ ನಿಗೂಢ ಶಕ್ತಿಯ ಸಂಕೇತವಾಗಿ ಬೆಳೆದು, ಹೆಣ್ಣು ಅದಕ್ಕೆ ಮಣಿಯುವ, ತಟಸ್ಥಳಾಗಿ ಅದನ್ನು ಸ್ವೀಕರಿಸುವ ಪರವಶತೆ ಮುಖ್ಯವಾಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಬೇಂದ್ರೆಕಾವ್ಯದಲ್ಲಿ ಫ್ಯಾಲಿಕ್ ಸಂಕೇತದ ಗೈರುಹಾಜರಿ ಜೊತೆಗೆ ಅದಕ್ಕೆ ಸಂಬಂಧಿಸಿದ ಅಧಿಕಾರ ಕೇಂದ್ರಗಳೂ ಇಲ್ಲ. ಬೇಂದ್ರೆ ಪದ್ಯಗಳಲ್ಲಿ ಬರುವ ಲಿಂಗ ಸೂಚಕ ಪ್ರತಿಮೆಗಳು ಇಂದ್ರಿಯ ಸೂಚಕಗಳಾಗಿ ಮಾತ್ರ ನಿಲ್ಲುತ್ತವೆಯೇ ಹೊರತು ಅಧಿಕಾರಿ ಸೂಚಕಗಳಲ್ಲ.” (ಶಕ್ತಿ ಶಾರದೆಯ ಮೇಳ). ಬೇಂದ್ರೆಯವರ ‘ಸಖೀ’ ಕಲ್ಪನೆ ಡಿ. ಆರ್. ನಾಗರಾಜ್ ಅವರ ಮೇಲಿನ ಮಾತುಗಳನ್ನು ಪುಷ್ಠೀಕರಿಸುತ್ತದೆ. ಅಲ್ಲಿ ಗಂಡ ಹೆಂಡತಿಯರಿಬ್ಬರೂ ‘ಸಖ-ಸಖಿ ಸಮಸುಖಿ’ ಗಳು. ಸಮಾನಾಂತರತೆ ಇಲ್ಲಿನ ಮೂಲ ಮಂತ್ರ. ಒಂದು ಇನ್ನೊಂದರ ಮೇಲಿನ ಯಾಜಮಾನ್ಯವಲ್ಲ. ”ಹೆಣ್ಣು ಗಂಡಿಗೆ ಚೆಲುವು, ಗಂಡು ಹೆಣ್ಣಿಗೆ ಒಲವು/ಇದುವೆ ಹೆಣಿಗೆಯ ಒಲವು ಮೂಲೋಕಕು”, ”ಎಂದು ಹೇಳಲೇ? ಇದನ್ನ ನಂಬಲೇ?” ಎಂದು ಕವಿ ವಿಸ್ಮಯ ಪಡುವಾಗ ಅವರ ವಿಸ್ಮಯಕ್ಕೆ ಸಮ್ಮತಿ ಸೂಚಿಸುವಂತೆ ಕೋಗಿಲೆ ಕೂಗಿ ಕೇಕೆ ಹಾಕಿ ಕುಣಿದಾಡುತ್ತದೆ. ಈ ಚೆಲುವಿಗೆ ನಾಶವೆಂಬುದಿಲ್ಲ. ಕಾರಣ ಈ ಚೆಲುವು ಭೌತಿಕವಾದದ್ದಲ್ಲ. ಸೌಂದರ್ಯವೆಂಬುದು ಒಂದು ಅನುಭೂತಿ. ಅದು ಕಣ್ಣಿಗೆ ಕಾಣುವಂತಹುದಲ್ಲ. ಒಳಗಣ್ಣಿನಿಂದ ಆತ್ಮಸಾತ್ ಮಾಡಿಕೊಳ್ಳುವಂತಹದ್ದು. ಇಂತಹ ಒಂದು ಅಭೌತಿಕ ಚಿಂತನೆಯೇ ಹೆಂಡತಿಯನ್ನು ಸಾಂಪ್ರದಾಯಕ ದೃಷ್ಟಿಕೋನದಿಂದ ಬಿಡಿಸಿಕೊಂಡಿದೆ. ಈ ಅಭೌತಿಕ ಚಿಂತನೆಗೆ, ಬೇಂದ್ರೆಯವರ ಮೇಲೆ ಪ್ರಭಾವ ಬೀರಿದ ಶ್ರೀಮಾತಾ ಮತ್ತು ಶಾರದಾ ದೇವಿಯವರ ಜೀವನದ ಸ್ವರೂಪ, ಅವರ ಧ್ಯೇಯಗಳು ಹಾಗೂ ಅವರ ಅಧ್ಯಾತ್ಮಿಕ ಔನ್ನತ್ಯಗಳು ಕಾರಣವಾಗಿರಬಹುದು. ಬೇಂದ್ರೆಯವರು ತಮ್ಮನ್ನು ತಾವು ವೇದಕವಿ ಎಂದು ಕರೆದುಕೊಳ್ಳುತ್ತಾರೆ. ಅವರನ್ನು ಪ್ರಭಾವಿಸಿದ ವೇದಕಾಲೀನ ಮಹಿಳೆಯರ ಮಾದರಿಗಳೂ ‘ಸಖೀಗೀತ’ದ ಹಿಂದೆ ಕೆಲಸಮಾಡಿರಬಹುದು. ಅಲ್ಲದೇ ಬೇಂದ್ರೆಯವರು ತಮ್ಮನ್ನು ಐದು ಐದೆಯರ ಮಗ ಎಂದು ಗುರುತಿಸಿಕೊಳ್ಳುವುದು ಕೂಡ ಮಾತೃಸಂಸ್ಕತಿಯನ್ನು ಅವರು ಗೌರವಿಸುವ ಪರಿಯೇ ಆಗಿದೆ. ‘ಅಂಬಿಕಾತನಯದತ್ತ’ ಎಂಬ ಅವರ ಕಾವ್ಯ ನಾಮವೂ ಇದಕ್ಕೆ ಸಾಕ್ಷಿಯಾಗಿದೆ. (ಸ್ತ್ರೀಯನ್ನು ಶಕ್ತಿಯೆಂದು ಆರಾಧಿಸುವ ಪರಿಕಲ್ಪನೆಯನ್ನು ಕವಿ ಇಲ್ಲಿ ಆತ್ಮಸಾತ್ ಮಾಡಿಕೊಂಡಿದ್ದಾರೆನಿಸುತ್ತದೆ). ಪುರುಷನೊಬ್ಬ ಪಿತೃಪ್ರಧಾನ ಸಮಾಜದ ಮೌಲ್ಯಗಳನ್ನು ಹೀಗೆ ಗಾಳಿಗೆ ತೂರಿ, ಹೆಂಡತಿಗೆ ಜೊತೆಗಾತಿಯ ಸ್ಥಾನಕೊಡುವುದು ಬಹಳ ಆಧುನಿಕವೆನಿಸುತ್ತದೆ. ಈ ನಿಟ್ಟಿನಲ್ಲಿ, ”ವಡ್ರ್ಸವರ್ತ್‌ನ ‘ದಿ.ಪ್ರಿಲ್ಯೂಡ್’ ಕಾವ್ಯದಂತೆ ಆತ್ಮನಿವೇದನದ ಉದ್ದೇಶಕ್ಕಾಗಿ ಅಂತರ್ಯಾನದ ತಂತ್ರವನ್ನು ಉಪಯೋಗಿಸುವುದರ ಮೂಲಕ ‘ಸಖೀಗೀತ’ ರೊಮ್ಯಾಂಟಿಕ್ ಪರಂಪರೆಗೆ ಸೇರುತ್ತದೆಯಾದರೂ, ನಿಷ್ಠುರ ಆತ್ಮಪರೀಕ್ಷೆ ಮತ್ತು ನಿಖರವಾದ ವಾಸ್ತವ ಪ್ರಜ್ಞೆಗಳ ಮೂಲಕ ಅಲ್ಲಿ ಅಭಿವ್ಯಕ್ತವಾಗುವ ಸಂವೇದನೆಯ ಸ್ವರೂಪ ಆಧುನಿಕವಾದದ್ದು. ರಮ್ಯವಾದ ಮತ್ತು ಆಧುನಿಕತೆಗಳ ಅಂಶಗಳನ್ನು ಒಳಗೊಂಡಿರುವುದು ‘ಸಖೀಗೀತ’ದ ಒಂದು ವೈಶಿಷ್ಟ್ಯವಾಗಿದೆ” (ಬೇಂದ್ರೆ ಸಮಗ್ರ ಕಾವ್ಯದರ್ಶನ – ಪು. 136, ಜೀವಿ ಕುಲಕರ್ಣಿ) ಎಂದು ಜಿ.ಎಸ್. ಆಮೂರರು ತಮ್ಮ ‘ಭುವನದ ಭಾಗ್ಯ’ ಕೃತಿಯಲ್ಲಿ ಅಭಿಪ್ರಾಯ ಪಡುವುದು, ಬೇಂದ್ರೆಯವರ ಆಧುನಿಕತೆಯ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ. ಆದರೆ ಬೇಂದ್ರೆಯವರು ಸಖೀಗೀತ ಬರೆಯುವ ಕಾಲಕ್ಕಾಗಲೇ ನವೋದಯಕಾಲದ ಪ್ರಾರಂಭದಲ್ಲೇ ಆಧುನಿಕತೆಯ ಪರಿಕಲ್ಪನೆ ಮೊದಲ ಕಾದಂಬರಿಗಳಲ್ಲೇ (ಕೆರೂರು ವಾಸುದೇವಾಚಾರ್ಯ ಮತ್ತು ಗುಲ್ವಾಡಿ ವೆಂಕಟರಾವ್) ಕಾಣಿಸಿಕೊಂಡಿತ್ತು ಎಂಬುದನ್ನೂ ನಾವು ಗಮನಿಸಬೇಕಾಗಿದೆ.
‘ಸಖೀಗೀತ’ ಕೇವಲ ದಾಂಪತ್ಯಗೀತೆ ಮಾತ್ರವಲ್ಲ. ಬೇಂದ್ರೆಯವರ ಕೌಟುಂಬಿಕ ಮತ್ತು ಸಾರ್ವಜನಿಕ ಬದುಕು ಎರಡೂ ಇಲ್ಲಿ ತಳಕು ಹಾಕಿಕೊಂಡಿವೆ. ಮದುವೆ, ಒಡನಾಟ, ಕೆಲಸದ ವರ್ಗಾವಣೆ, ಮಕ್ಕಳ ಹುಟ್ಟು ಸಾವುಗಳು, ಬಡತನ ನೋವುಗಳು ಮುಂತಾದ ‘ಕಾಳರಾತ್ರಿಯ’ ಬದುಕಿನ ಬವಣೆಯ ಜೊತೆಗೆ ಕರ್ನಾಟಕ ಏಕೀಕರಣ, ಜಯಕರ್ನಾಟಕ, ಕನ್ನಡ ಸೇವೆ., ‘ನರಬಲಿ’ ಕವಿತೆಯ ಪರಿಣಾಮವಾಗಿ ಹಿಂಡಲಗಿ ಜೈಲು ವಾಸ, ಗಾಂಧೀಜಿಯ ಉಲ್ಲೇಖ, ಗೆಳೆಯರ ಸಹಕಾರ, ಅವಿಶ್ವಾಸ ಹೀಗೆ ಬೇಂದ್ರೆಯವರ ಜೀವನದ ಮುಖ್ಯ ಘಟ್ಟಗಳು ಕವಿತೆಯಲ್ಲಿ ಹಾದು ಹೋಗುತ್ತವೆ. ಹೆಂಡತಿ ಜೊತೆಗೆ ಪಟ್ಟಪಾಡುಗಳನ್ನು ಮತ್ತೆ ನೆನಪು ಮಾಡಿಕೊಳ್ಳುವುದೇನೋ ಸರಿ. ಆದರೆ ಅವರ ಸಾರ್ವಜನಿಕ ಬದುಕಿನ ಬವಣೆಗಳನ್ನೂ, ಅದರ ಪ್ರಮುಖ ಮೈಲಿಗಲ್ಲುಗಳನ್ನೂ ‘ಅವಳ್ಗೇನು ತಿಳೀತದೇ ಮೊಣಕಾಲ ತಳ್ಗೆ ಬುದ್ಧಿ…’ ಎನ್ನುವ ತಿರಸ್ಕಾರವೇ ಮೇಲುಗೈಯಾಗಿರುವ ಸಂದರ್ಭದಲ್ಲಿ ಕೂಡ ಅವಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಅವರು ಹೀಗೆ ಮಾಡುವುದರ ಹಿಂದೆ ಇವೆಲ್ಲವೂ ಅವಳಿಗೆ ಅರ್ಥವಾಗುವುದೆಂಬ ಗ್ರಹೀತವೇ ಅಡಗಿದೆ! ಈ ಎಲ್ಲಾ ಕಾರ್ಪಣ್ಯಗಳ ನಡುವೆ ಸಖಿ ”ದುಃಖದಿ ನಸುನಕ್ಕು ದುಃಖವ ಹಗುರಮಾಡದಿರೆ” ತಾನು ಬದುಕುಳಿಯಲು ಸಾಧ್ಯವಿತ್ತೇ ಎಂದು ಅವಳಿಗೆ ಕೃತಜ್ಞತೆಯನ್ನೂ ಅರ್ಪಿಸುತ್ತಾರೆ. ಹೀಗೆ ಮಾಡುವುದರ ಮೂಲಕ ಕೌಟುಂಬಿಕ ಜೀವನ, ದಾಂಪತ್ಯ ಮತ್ತು ಸಾರ್ವಜನಿಕ ಜೀವನಗಳು ಬೇರೆ ಬೇರೆ ಎಂಬ ಭೇದವನ್ನು ಅಳಿಸಿಹಾಕಿ ಅವು ಒಂದೊನ್ನೊಂದು ಬೆಸೆಯುವ ಹಾಗೆ ಪರಸ್ಪರ ಪ್ರಭಾವಿಸಬಲ್ಲವು ಎಂಬುದನ್ನು ಎತ್ತಿಹಿಡಿದಿದ್ದಾರೆ. ಆದುದರಿಂದ ‘ಸಖೀಗೀತ’ ಖಾಸಗಿ ದಾಖಲೆ ಮಾತ್ರ ಆಗದೇ ಸಾರ್ವಜನಿಕ ದಾಖಲೆಯೂ ಆಗಿದೆ.
ಬಹಳ ಮಹತ್ವದ ಸಂಗತಿಯೆಂದರೆ ಬೇಂದ್ರೆಯವರ ಪ್ರಮುಖ ಕವಿತೆಗಳು ಹುಟ್ಟಿದ ಸಂದರ್ಭವನ್ನೂ ಅವರ ಕಾವ್ಯ ವ್ಯಾಪಾರದ ಸ್ವರೂಪವನ್ನು ಅದು ಬೆಳೆದ ಬಗೆಯನ್ನೂ ಈ ಕವಿತೆ ದಾಖಲಿಸುತ್ತದೆ. ಗರತಿಯರ ಹಾಡುಗಳು, ಲಾವಣಿಗಳು ದೇಸೀ ಛಂದಗಳಿಂದ ತಮ್ಮ ಕಾವ್ಯವನ್ನು ‘ಪಂಡಿತಪಾಮರರಿಬ್ಬರ ನಾಲಿಗೆಯೊಳು ಒಡಂಬಡುವಂತೆ ರಚಿಸಿದೆ’ ಎನ್ನುತ್ತಾರೆ. ”ಛಂದೋಗತಿ ಚೆಂದ, ತಾಳ ಲಯದಾನಂದ ಸ್ವಚ್ಛಂದ ಬಂಧವ ಕಲಿಸಿದವು/ ನಾಡಬಳಕೆಯ ನುಡಿಗೆ ಸೋತಿದ್ದ ಮನವನು ಹಾಡಿನ ಮೋಡಿಗೆ ಒಲಿಸಿದವು” ಎನ್ನುವಾಗ ತಮ್ಮ ಕಾವ್ಯೋದ್ಯೋಗದ ಪ್ರಕ್ರಿಯೆಯನ್ನು ಬಯಲಾಗಿಸುತ್ತಾರೆ. ”ಆಷಾಢದ ಮುಗಿಲು ಬೀಸಾಡಿ ಬಂದವು/ ಈಸಾಡಿ ಬಂದಂಥ ಆನೆಗಳೇ” ಎಂಬಂಥ ಸಾಲುಗಳು ‘ಕನ್ನಡ ಮೇಘದೂತ’ ರಚನೆಗೆ ಕಾರಣವಾಗಿರಬಹುದಾದ ಸಂದರ್ಭಗಳನ್ನು ಸೂಚಿಸುತ್ತವೆ. ”ಪಾದ ಪದ್ಧತಿಯಲ್ಲಿ ಪದ ಕೂಡಿ ಬರುವಾಗ / ಯಾರಾರೆ ಗುರು -ಲಘು ಎಣಿಸುವರೆ? ಯಾ ರಾಗವೆಂದರು ಯಾರಾಗ ಕೇಳುವರು/ ಅನುರಾಗವನುರಣಿಸಿ ತಣಿಸುತಿರೆ” ಈ ಸಾಲುಗಳು ಕೌಟುಂಬಿಕ ನೆಲೆಯಲ್ಲಿ ಸಾಮಾಜಿಕ ಕಟ್ಟುಪಾಡುಗಳನ್ನು ಮಾತ್ರ ಮುರಿಯುತ್ತಿಲ್ಲ. ಕಾವ್ಯಕ್ಕೆ ಕಟ್ಟಿದ ಕಟ್ಟುಪಾಡುಗಳನ್ನೂ ಮುರಿಯುತ್ತಿವೆ. ಹೀಗೆ ಸಿದ್ಧಮಾದರಿಗಳನ್ನು ಒಡೆಯುವದರ ಹಿಂದೆ ಅವರನ್ನು ಪ್ರಭಾವಿಸಿದ ಅಲ್ಲಮನ ಆಲೋಚನೆಗಳು ಕಾರಣವಾಗಿರಬಹುದು. ಈ ಎಲ್ಲವುಗಳನ್ನು ಅವರು ತಮ್ಮ ಸಖಿಯ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಗಮನದಲ್ಲಿಡಬೇಕು.
‘ಸಖೀಗೀತ’ ವೆಂದರೆ ಸಖಿಗೂ ಸಖನಿಗೂ ಅಂಟಿದ ನಂಟು. ಅದು ಮಧುರವಾಗಿರುವಂತೆ, ಜೇಡ ತನ್ನ ಬಲೆಯಲ್ಲಿ ನೊಣವನ್ನು ಹಿಡಿಯಲು ಸುರಿಸಿದ ಅಂಟು ಕೂಡ ಆಗಬಹುದು. ”ಈ ಜಾಲ ಜಗದಗಲ ಬೀಸಿಹುದು” ಎನ್ನುವಾಗ ಅಕ್ಕಮಹಾದೇವಿಯ ”ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ” ಎಂಬ ವಚನ ನೆನಪಿಗೆ ಬರುತ್ತದೆ. ಆದರೆ ಇಲ್ಲಿ ಕವಿ ಬದುಕನ್ನು ನಶ್ವರ ಎನ್ನುವುದಿಲ್ಲ. ಜೇಡದ ಮಾಯಾ ಜಾಲದಲ್ಲಿ ಸಿಕ್ಕು ಒದ್ದಾಡುವುದಿಲ್ಲ. ಅವರ ಆಶಾವಾದ ”ಹೀಗೆಂದು ಹಿಂಜರಿದು ಕಂಗೆಡಬೇಡ…. ಕಣ್ಬಿಟ್ಟು ಕರುಣೆಯಲಿ ಅರುಣ ದೃಷ್ಟಿಯ ತೆರೆದು ನೋಡು ನಸಕು ಹರಿಯುವುದೀಗಳೇ” ಎಂದು ಅದನ್ನು ಮತ್ತೊಂದು ಇತ್ಯಾತ್ಮಕ ನೆಲೆಗೆ ಕೊಂಡೊಯ್ಯುತ್ತದೆ ಎನ್ನುವುದೇ ಬಹಳ ಮುಖ್ಯವಾದುದು.
ಇಡೀ ಕವಿತೆಯುದ್ದಕ್ಕೂ ಸಖನೇ ಮಾತನಾಡಿದ್ದರೂ ಅವನು ಸಖಿಯ ಮಾತುಗಳನ್ನೂ ಆಡಿದ್ದಾನೆ. ಹಾಗೆ ಮಾಡುವಾಗ ಅಲ್ಲಿ ತನ್ನನ್ನೇ ತಾನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿಕೊಂಡಿದ್ದಾನೆ. ”ನಿಮ್ಮ ಮಾತೇ ಬೇರೆ, ಮನ ಬೇರೆ, ಜನ ಬೇರೆ/ರಸ ರುಚಿ ಬೇರೆ, ಜೀವನ ಬೇರೆಯೇ….. ನಮ್ಮ ಹಚ್ಚರ ಮಾತು ಹುಡುಗಾಟಿಕೆ/ ಗಂಗೆಯ ಕಷ್ಟವು ಗೌರಿಗೆ ತಿಳಿಯದು ಹೆಂಗಸಿನ ಕಷ್ಟವು ಗಂಡಸಿಗೆ” ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಲಾರದೇ ಹೋದ ಗಳಿಗೆಗಳನ್ನೂ ದಾಖಲಿಸಿರುವುದು, ಗಂಡಗರ್ವವನ್ನು ಒಪ್ಪಿಕೊಳ್ಳುವ ಗಂಡಸಿನ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುತ್ತದೆ. ಆದುದರಿಂದಲೇ ಬಹುಶಃ ”ಎಂದಿನಿಂದಲೋ ಏನೋ ಒಳಗೊಂದು ಸಖಜೀವ ಸಖಿ! ಬಾರೆ ಬಾ! ಎಂದು ಕೂಗುತಿದೆ… ಮುಂದಿನ ಪಥದಲ್ಲಿ ಸಖಿಯಗು ಬಾ…”. ‘ಸಖೀ’ ಎನ್ನುವ ಪರಿಕಲ್ಪನೆ ಬೇಂದ್ರೆಯವರ ಅಂತರ್ಯಾನದ ಒಂದು ತಂತ್ರಕೂಡ ಆಗಿರಬಹುದು. ಆದರೆ ಗಂಡುಗರ್ವದಿಂದ ದಾಂಪತ್ಯ ನರಳುತ್ತಿದೆ ಎನ್ನುವ ಅರಿವು ಗಂಡಸಿಗೆ ಮೂಡುವುದೇ ಬಹಳ ಮಹತ್ವವಾದದ್ದು. ಇಂತಹ ತಪ್ಪೊಪ್ಪಿಗೆಯೇ ಆದರ್ಶ ದಾಂಪತ್ಯಕ್ಕೆ ಬರೆದ ಉತ್ತಮ ವ್ಯಾಖ್ಯೆಯಾಗಿಬಿಡುತ್ತದೆ. ಇಂತಹ ಸಖ ಸಖೀ ಭಾವ ಆ ಕಾಲದ ಯುವಕರ ಕನಸೂ ಆಗಿತ್ತೆಂಬುದನ್ನು ಇದು ಧ್ವನಿಸುತ್ತದೆ.
ಬೇರೆ ಕವಿತೆಗಳಲ್ಲಿ ‘ಆಡದಿರು ಮನದನ್ನೆ ಎನಗೆ ಇದಿರಾಡದಿರು… ಬಾಳನ್ನು ಬೇಳೆ ಮಾಡದಿರು’ ಎಂದು ತಮ್ಮ ಗಂಡು ಗರ್ವವನ್ನು ಕವಿ ಮೆರೆದಿರಬಹುದಾದರೂ ‘ಸಖೀಗೀತ’ ದಲ್ಲಿ ಮಾತ್ರ ಅಂತಹ ಯಾವ ಅಹಂಕಾರವನ್ನೂ ಪ್ರದರ್ಶಿಸುವುದಿಲ್ಲ ಎನ್ನವುದನ್ನು ಗಮನಿಸಬೇಕು.
ಸಖ್ಯದ ಆಖ್ಯಾನ ಎನ್ನುವುದೇ ಕರುಳಿನ ತೊಡಕು ಅದನ್ನು ಬೇಂದ್ರೆಯವರು ‘ಕುಸುರಾಗಿ ಬಿಡಿಸಿಟ್ಟು ತೊಡವಾಗಿ ಧರಿಸಿ’ದರು. ಆ ಧಾರಣೆಯ ರೂಪವೇ ಸಖೀಗೀತ. ಭೂತದ ಕಾಳರಾತ್ರಿಯ ತೊಡಕುಗಳಿಗೆ ಕಾಲದ ಅಂತರ ದೊರೆತಿದೆ. ಅವು ಕವಿಗೆ ಶಕ್ತಿಯನ್ನು ಇತ್ತಿವೆ ಆದುದರಿಂದಲೇ ಅವು ವರ್ತಮಾನದಲ್ಲಿ ಕವಿತೆಯ ಸಾಲುಗಳಾಗಿ ಅರಳಿವೆ.