ಪಮ್ಮಿಯ ಮಾರ್ಜಾಲ ಪ್ರೇಮ

”ರೀ !” ಎನ್ನುವ ಮಡದಿಯ ಪ್ರೀತಿಯ ಕರೆಗೆ ಗಂಡ ಪರ್ಮಿ ಅಲಿಯಾಸ್ ಪರಮೇಶ್ವರನ ಕಿವಿ ಕೊಂಚ ಜಾಗೃತವಾಯಿತು . 

”ಪರ್ಮಿ” ಎನ್ನುವ ಅಡ್ಡ ಹೆಸರಿನಿಂದಲೆ ಅಧಿಕಾರವಾಣಿಯಿಂದ ಆಗಾಗ ತನ್ನನ್ನು ಕರೆಯುತ್ತಿದ್ದ ಮಡದಿ ಪಮ್ಮಿ ಅಲಿಯಾಸ್  ಪ್ರಮೀಳಾಳ  ”ರೀ” ಎನ್ನುವ ಸಂಭೋದನೆಯಲ್ಲಿ ಏನಾದರೂ ಹೊಸ ಬೇಡಿಕೆ, ಅಹವಾಲು, ಅಣತಿಗಳು ಇರಲೇಬೇಕು ಎಂಬ ದೂರಾಲೋಚನೆ ಅವನ ಬಳಿ ಸುಳಿದಾಡಿತು.

ಮತ್ತೊಮ್ಮೆ,  ”ರೀ ! ನನ್ನ ಗೆಳತಿ ಕೀರ್ತಿ ಗೊತ್ತಲ್ಲ ! ಅವರ ಮನೆ ಬೆಕ್ಕು ಅದೇ ನಮ್ಮ ಅಪಾರ್ಟ್‌ಮೆಂಟಿನ ಕ್ಯಾಟ್ ಶೋನಲ್ಲಿ ಮೊದಲ ಬಹುಮಾನ ಗೆದ್ದುಕೊಂಡಿತ್ತಲ್ಲ , ಅದು ಮೂರು ಮರಿ ಹಾಕಿದೆಯಂತೆ, ನಾವೂ  ಒಂದು ಮರಿ ಸಾಕೋಣವಾ” ಅವನ ಹತ್ತಿರ ಸರಿದು ಪ್ರೀತಿಯಿಂದ ಉಲಿದಾಗ ಬೆಕ್ಕಿನಂತೆಯೇ ಟಣ್ಣನೆ ಎಗರಿ ಬೀಳುವಂತಾಯಿತು ಪರ್ಮಿಗೆ! 

”ಅಯ್ಯೋ ! ದಯವಿಟ್ಟು ಬೇಡಮ್ಮ ಮಾರಾಯತಿ, ಬೆಕ್ಕುಗಳನ್ನ ಮನೇಲಿ ಸಾಕೋದು ಅಂದ್ರೆ ನನಗೆ ಮೊದಲಿಂದಲೂ ಇಷ್ಟ ಇಲ್ಲ ಕಣೆ” ಎಂದು ಅವಳ ಆಸೆಗೆ ತಣ್ಣೀರು ಎರೆಚಿದಾಗ ಪಮ್ಮಿಯ ಮುಖಾರವಿಂದ ಸಪ್ಪಗಾಯಿತು . 

‘ಲಿಂಗ ಮೆಚ್ಚಿ ಆಹುದಹುದು ಎನ್ನಬೇಕು’ ಎನ್ನುವ ಬಸವಣ್ಣನವರ ವಚನದ ಕೊನೆಯ ಸಾಲನ್ನು ಮಾತ್ರ ಶೃದ್ಧಾ ಭಕ್ತಿಯಿಂದ ನೆನಪಿಟ್ಟುಕೊಂಡು ತನ್ನ ಪತಿ ‘ಪರಮೇಶ್ವರ’ ತನ್ನ ಮಾತಿಗೆಲ್ಲ ಮೆಚ್ಚುಗೆ ತೋರಿ ಗ್ರೀನ್ ಸಿಗ್ನಲ್ ಕೊಡಬೇಕು ಎಂದು ಆಶಿಸುವ ಮುಗ್ಧ ಮಡದಿ ಪಮ್ಮಿ!

ಆದರೆ ಎರಡು ವರ್ಷಗಳ ಹಿಂದೆ ಅವರಿಬ್ಬರ ಮದುವೆಗೆ ಮುನ್ನ  ”ಸಾಕು ಪ್ರಾಣಿಗಳು ಅದರಲ್ಲೂ ಬೆಕ್ಕು ಅಂದ್ರೆ ನನಗೆ ತುಂಬಾ ಇಷ್ಟ, ಎಷ್ಟು ಮುದ್ದಾಗಿರುತ್ತೆ!” ಎಂದೆಲ್ಲ ಮಾರ್ಜಾಲ ಪ್ರಿಯೆ ಪಮ್ಮಿಯನ್ನು ಮೆಚ್ಚಿಸಲು ಗಂಡ ಹೇಳಿದನ್ನು ಮತ್ತೊಮ್ಮೆ ನೆನಪು ಮಾಡಿಕೊಟ್ಟು ತಿವಿದಳು . ”ಹೌದು ಕಣೆ ನನಗೆ ಬೆಕ್ಕು ಅಂದ್ರೆ ಇಷ್ಟಾನೆ. ಆದರೆ ಅವೆಲ್ಲ ನಾನು ಸಣ್ಣವನಿದ್ದಾಗ, ಯು ಟ್ಯೂಬ್‌ನಲ್ಲಿ ಟಾಮ್ ಅಂಡ್ ಜೆರಿ ಕಾರ್ಟೂನ್ ನೋಡೋವಾಗ ಮಾತ್ರ ಅದರ ತುಂಟಾಟಗಳು ಇಷ್ಟವಾಗ್ತಾ  ಇತ್ತು! ಆದರೆ ಮನೆಯಲ್ಲಿ ಸಾಕೋಕೆ ಅಲ್ಲಮ್ಮ ಮಾರಾಯತಿ” ಎಂದು ನಗುತ್ತಾ  ಕೈ ಮುಗಿದಾಗ ತನ್ನನ್ನು ಮೆಚ್ಚಿಸಲು ಗಂಡ ಆಡಿದ ಹಸಿ ಸುಳ್ಳನ್ನು ನಿಜವೆಂದು ನಂಬಿದ ಆಕೆಗೆ ಭ್ರಮನಿರಸನವಾದರೂ ಕಿಲಾಡಿ ಸೇಲ್ಸ್‌ಮನ್ನು ಹೇಗಾದರೂ ಮಾಡಿ ಬೋಳು ಮಂಡೆಯವರಿಗೂ ಶ್ಯಾಂಪೂ ಮಾರಿದಂತೆ ಪಮ್ಮಿ ತನ್ನ ಪಟ್ಟು ಬಿಡದೆ ”ಅಯ್ಯೋ! ಪುಟಾಣಿ ಬೆಕ್ಕಿನ ಮರಿ ಎಷ್ಟು ಕ್ಯೂಟಾಗಿರುತ್ತೆ! ಅದರ ಮುದ್ದು ಆಟಗಳನ್ನು ನೋಡ್ತಾ ಇದ್ದರೆ ಹೊತ್ತು ಕಳೆಯೋದೆ ಗೊತ್ತಾಗೋಲ್ಲ. ನಿಮಗೇ ಗೊತ್ತಲ್ಲ ನಾನು ಅಮ್ಮನ ಮನೆಯಲ್ಲಿ ನಮ್ಮ ಮುದ್ದು ಮೀನು ಮರಿಯನ್ನ ಎಷ್ಟು ಹಚ್ಕೊಂಡಿದ್ದೆ ಅಂತ. ಒಂದಿಷ್ಟು ಹಾಲು ಹಾಕಿದ್ರೆ ಸಾಕು(ಈಗ ಸಧ್ಯಕ್ಕೆ ) ನಮ್ಮನೆ ಮಗು ತರ ಇರುತ್ತೆ!” ಅವಳ ಮನವೊಲಿಸುವಾಟಕ್ಕೆ ಬೆಕ್ಕು ಸಾಕಲು ಹೋಗಿ ಮುಂದೇನು ಗ್ರಹಚಾರ ಕಾದಿದೆಯೋ ಎಂದು ಪರ್ಮಿ ಚಿಂತಾ(ಕಾ)ಕ್ರಾಂತನಾದ ! 

ಪಮ್ಮಿ ನನಗೇನೋ  ಬೆಕ್ಕಿಗಿಂತ ನಾಯಿ ಸಾಕುವುದು ಒಳ್ಳೇದು ಅನಿಸುತ್ತೆ , ವಿಶ್ವಾಸಿಕ ಪ್ರಾಣಿ. ಬೆಕ್ಕುಗಳ ಹಾಗೆ ಸ್ವಾರ್ಥಿಯಲ್ಲ, ಸಾಕಿದವರಿಗೆ ಮೇಲೆ ರಾಶಿ ಪ್ರೀತಿ ತೋರಿಸುತ್ತೆ ಕಣೆಎಂದು ನಾಯಿ ಕಡೆಗೆ ಬ್ಯಾಟ್ಟಿಂಗ್ ಮಾಡುತ್ತಾ ಅವಳ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಿದ.

ಆದರೆ ಪಮ್ಮಿಯ  ಮನಸ್ಸಿನ ತುಂಬೆಲ್ಲ ಆ ಹೊಂಬಣ್ಣದ ನೀಲಿ ಕಂಗಳ ಬೆಕ್ಕಿನ ಮರಿಗಳು ಮೋಡಿ ಮಾಡಿಬಿಟ್ಟಿದ್ದವು. ಸೀತಾ ಮಾತೆ ಚಿನ್ನದ ಜಿಂಕೆಯ ಮಾಯೆಗೆ ಒಳಗಾದವಳಂತೆ ಪಮ್ಮಿಗೆ  ಆ ಮುದ್ದು ಬೆಕ್ಕುಗಳನೆತ್ತಿ ಮುದ್ದಾಡುವ ತವಕ  ಹೆಚ್ಚಾಯಿತು. ಇನ್ನು ಪ್ರೈಮರಿ ಶಾಲೆಯಲ್ಲಿದ್ದಾಗೊಮ್ಮೆ ಕೈಯಲ್ಲಿ ಬನ್ನು ಹಿಡಿದು ಧೀರೋದಾತ್ತಳಾಗಿ ಬರುತ್ತಿರುವಾಗ ಅಚಾನಕ್ಕಾಗಿ ಬೀದಿ ನಾಯಿಯೊಂದು ದಾಳಿ ನಡೆಸಿ ಬನ್ನಿನ ಕವರಿಗೆ ಮೂತಿ ಇಟ್ಟು, ಅವಳ ಕೈ ಕಚ್ಚಿ ಓಡಿ ಹೋದಾಗಿನಿಂದ ಅವಳು ಶ್ವಾನ ದ್ವೇಷಿಯಾಗಿದ್ದಳು .

”ರೀ ! ನಾಯಿ ಸಾಕೋದು ಬಹಳ ಜವಾಬ್ದಾರಿ ಕೆಲಸ! ಮೂರು ಹೊತ್ತು ಊಟ ಹಾಕಿ ವೇಳೆಗನುಸಾರವಾಗಿ ನಾವು ಎಷ್ಟೆ ಬ್ಯುಸಿ ಇದ್ರೂ ವಾಕಿಂಗಿಗೆ  ಕರೆದೊಯ್ಯಬೇಕು. ನನಗಂತೂ ಈ ಫೇಸ್ಬುಕ್ ವಾಟ್ಸಾಪ್ಗಳನ್ನ ನೋಡ್ತಾ  ನಾಯಿ ಬಿಡಿ ನಿಮ್ಮ ಜೊತೆಗೇ ವಾಕಿಂಗ್ ಮಾಡಲು ಟೈಮ್ ಇಲ್ಲ! ಅದನ್ನೊಂದನ್ನೆ ಬಿಟ್ಟು ಊರಿಗೆ ಹೋಗುವ ಹಾಗಿಲ್ಲ. ಇನ್ನು ಅದರ ಕೆಟ್ಟ ದನಿಯ ಬೊಗಳಾಟಕ್ಕೆ ನಮ್ಮ ಅಪಾರ್ಟ್‌ಮೆಂಟಿನ ನೆರೆ ಹೊರೆಯವರಿಗೂ ತೊಂದರೆಯೇ ಸರಿ. ಆದರೆ ಮುದ್ದು ಬೆಕ್ಕು ‘ಮೀಯಾಂವ್’ ಅಂತ ಇಂಪಾಗಿ ಕೂಗ್ತಾ ಯಾರಿಗೂ ತೊಂದರೆಯಾಗದಂತೆ ಮನೆಯಲ್ಲೆ ಓಡಾಡಿಕೊಂಡು ಇರುತ್ತೆ” ಎಂದು ನಾಯಿ ಸಾಕುವ ಕಿರಿಕಿರಿಯನ್ನು ಪರಿಪರಿಯಾಗಿ ಬಿಡಿಸಿ ಮೈಕ್ರೋಸ್ಕೋಪಿನಡಿಯಲ್ಲಿ ಬೃಹದಾಕಾರವಾಗಿ ತೆರೆದಿಟ್ಟಾಗ ಪರ್ಮಿಗೆ ಇಂಪಾದ  ‘ಮಿಯಾಂವ್’ ದನಿ ಸಪ್ತ ಸ್ವರದಲ್ಲಿ ರಿಂಗಣಿಸಿದಂತೆ ಭಾಸವಾಯಿತು !

ಆದರೆ ಬೆಕ್ಕಿನ ಕೂದಲು ತನ್ನ ಅಸ್ಥಮಾ ಅಲರ್ಜಿಗೆ  ಮಾರಕ ಎಂದು ನೆನಪಾಗಿ  ಕ್ಷಣಾರ್ಧದಲ್ಲೇ ಬಣ್ಣ ಬದಲಾಯಿಸುವ ರಾಜಕಾರಣಿಗಳಂತೆ ತನ್ನ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟು ಅವಳನ್ನು ಎಮೋಶನಲ್  ಬ್ಲಾಕ್‌ಮೇಲ್ ಮಾಡಿದ ಬಡಪಾಯಿ ಗಂಡ! ಆದರೆ ಪಟ್ಟು ಹಿಡಿದ ಮಡದಿಗೆ ಗಂಡನಿಗಿಂತ ಕ್ಯೂಟ್ ಕಿಟ್ಟನ್ ಮೇಲೇ ಎಮೋಷನ್ ಹೆಚ್ಚಾಯಿತು!

ಮೂಲೆಯಲ್ಲಿ ಧೂಳು ತಿನ್ನುತ್ತಿದ್ದ ವಾಕ್ಯೂಮ್ ಕ್ಲೀನರ್ ಕಡೆ ದಿಟ್ಟಿಸಿ ”ನಿಮಗೆ ಬೆಕ್ಕಿನ ಕೂದಲಿನಿಂದ ಯಾವ ತೊಂದರೆಯೂ ಬಾರದಂತೆ  ಮನೆಯ ಮೂಲೆ ಮೂಲೇನೂ ಕ್ಲೀನ್ ಮಾಡಿದರಾಯಿತು ಬಿಡಿ” ಕೂಲಾಗಿ ನುಡಿದಾಗ, ಆ ಕತ್ತೆ ಚಾಕರಿಯೂ ತನಗೆ ಬೀಳುವುದು ಎನ್ನುವುದವನಿಗೆ ಖಾತ್ರಿಯಾಯಿತು .

ಗಂಡನ ವಕ್ರ ಮುಖಭಾವದಿಂದಲೇ ಅವನ ಮನದಿಂಗಿತ ಗ್ರಹಿಸುವ ವಿಶೇಷ ಪ್ರತಿಭೆಯಿದ್ದ ಪಮ್ಮಿ ”ನಮ್ಮನೆ ಕೆಲಸದ ಗಂಗಾಳಿಗೆ ವಾಕ್ಯೂಮ್ ಮಾಡೋದು ಚೆನ್ನಾಗಿ ಬರುತ್ತೆರೀ, ತಿಂಗಳ ಸಂಬಳದ ಜೊತೆ ಒಂದು ಐನೂರು ಹೆಚ್ಚು ಕೊಟ್ರೆ ಅದನೂ ಮಾಡಿ ಬಿಡ್ತಾಳೆ” ಹುರುಪಿನಲ್ಲಿ ಉಲಿದಾಗ ಪರ್ಮಿಗೆ ಊದುವುದನು  ಕೊಟ್ಟು ಬಾರಿಸುವುದು ಕೊಂಡಂತಾಗಿ ಅವಳ  ಲೆಕ್ಕಾಚಾರಕ್ಕೆ ಅಳಬೇಕೋ ನಗಬೇಕೋ ತಿಳಿಯದಾಯಿತು! 

ಕೆಲಸಕ್ಕೆ ಸೇರಿದ ಹೊಸತರಲ್ಲಿ ಸಾಫ್ಟವೇರ್ ಉದ್ಯೋಗಿಗಳಂತೆ ಗಂಗಾ ಒಮ್ಮೊಮ್ಮೆ ಶನಿವಾರ ಭಾನುವಾರ ಒಟ್ಟಿಗೆ ಚಕ್ಕರ್ ಹೊಡೆದು ಮನೆಗೆಲಸದ ರೂಢಿಯೆ ಇಲ್ಲದ ಏಕೆಮೇವ ಸುಪುತ್ರಿಯಾಗಿ ಬೆಳೆದ ಪಮ್ಮಿಯನ್ನು ಕಂಗಾಲಾಗಿಸಿದಾಗ ಗಂಗಾಳನ್ನು ಸಂತುಷ್ಟಗೊಳಿಸಲು ಅವಳ ಇಷ್ಟಾರ್ಥಗಳ ಕಡೆ ವಿಶೇಷ  ಗಮನ ಹರಿಸಲು ಶುರು ಮಾಡಿದ್ದಳು. ಬೆಳಿಗ್ಗೆ ತಿಂಡಿಯ ಜೊತೆ ಟೀ ಕಾಫಿ ಕುಡಿದರೆ ಅಸಿಡಿಟಿ ಆಗುತ್ತಿದ್ದರಿಂದ ಅವಳಿಗೆ ಹಾಲನ್ನೆ ನೀಡಿ ತಾನುಡದೆ ಇಟ್ಟ ಚಂದದ ಸೀರೆಯಿಂದ  ಹಿಡಿದು ಅವಳ ಮಗಳ ಮದುವೆ ಸಂದರ್ಭದಲ್ಲಿ ಚಿನ್ನದ ಓಲೆಯನ್ನೂ ಉಡುಗೊರೆಯಾಗಿ ಕೊಟ್ಟು ತನ್ನ ಮನೆಗೆಲಸವನ್ನು ಅಚ್ಚುಗಟ್ಟಾಗಿ ಹೆಚ್ಚು ಚಕ್ಕರ್ ಹಾಕದೆ ಮಾಡುವಂತೆ ಗಂಗಾಳನ್ನು ಓಲೈಸಿದ್ದಳು. ಈ ವಿಷಯದಲ್ಲಿ ಮಡದಿಯ ಸಾಹಸ, ಜಾಣ್ಮೆ ಗಂಗೆಯನ್ನು ಭೂಮಿಗೆ ತರಲು ಭಗೀರಥ ಕೈಗೊಂಡ ಸಾಹಸವನ್ನೂ ಮೀರಿದ್ದು ಎಂದು ಎಷ್ಟೋ ಬಾರಿ ಪರ್ಮಿಗೆ ಅನಿಸ್ಸಿದುಂಟು!

ಅಂತೂ ಗಂಡನ ಅಲರ್ಜಿ ಸಮಸ್ಯೆ ಪಮ್ಮಿಯ ಮೇಲೆ ಯಾವ ಪರಿಣಾಮವೂ ಬೀರದೆ ಅವನ ಮೌನ ಮುದ್ರೆ ಅವಳ ಸಿಟ್ಟೇರಿಸುವ ಅಡ್ಡ ಪರಿಣಾಮವೇ ಬೀರಿತು ! ”ನೋಡಿ ನನಗೆ ಆ ಬೆಕ್ಕು ಮರಿ ಬೇಕೆ ಬೇಕು. ಪಾಪ ಅದು ಇನ್ನೆನ್ನು ತಾನೇ ಕೇಳುತ್ತೆ? ದಿನಕ್ಕೆ ಮೂರು ಸಲ ಹಾಲು ತಾನೇ? ಹಾಗೇನೇ ಅದರ ಅಮ್ಮ ತನ್ನ ಮರೀನಾ ಆಗಾಗ ನೋಡೋಕೆ ಬರುತ್ತಂತೆ. ಬಾಣಂತಿ ಬೇರೆ! ಅದಕ್ಕೂ ಒಂದಿಷ್ಟು ಹಾಲು ಹಾಕಿದರಾಯಿತು” ಎಂದು ಮನೆಯಲ್ಲಿ ಹಸು ಕಟ್ಟಿವದರಂತೆ ಪಮ್ಮಿ ಧಾರಾಳತನವನ್ನು ಪ್ರದರ್ಶಿಸಿದಾಗ ಗಂಗಾಳ ಜೊತೆ  ಈ ( ಕಳ್ಳ ) ಬೆಕ್ಕಿಗೂ ಹಾಲು ಪೂರೈಸಬೇಕಲ್ಲಾ ಎನ್ನುವ ಹೆಚ್ಚಿನ ಖರ್ಚಿಗೆ ತಲೆ ಪರಚಿ ಕೊಳ್ಳುವಂತಾದರೂ ಮುದ್ದಿನ  ಮಡದಿಯ ಆಸೆಗೆ ತನ್ನ ಹಟವನ್ನು ಸಡಲಿಸಿ,  ”ಒಂದು  ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು” ಎನ್ನುವ ಕವಿವಾಣಿಯಂತೆ ಒಲ್ಲದ ಮನಸ್ಸಿನಿಂದಲೇ ಅವಳನ್ನು ಸಂಪ್ರೀತಗೊಳಿಸುವ ನಿರ್ಧಾರಕ್ಕೆ ಬಂದ.

”ಆಯ್ತು ಮಹಾರಾಯತಿ ! ನಾಳೆ ಹೇಗೂ ಭಾನುವಾರ, ಕೀರ್ತಿ ಮನೆಗೆ ಹೋಗಿ ಬೆಕ್ಕಿನ ಮರಿ ತಂದರಾಯಿತು” ಎಂದು ಅನ್ನೌನ್ಶಿಸಿದ. ಸಾವಿರ ವ್ಯಾಟ್ ಬಲ್ಬಿನಂತೆ ಪಮ್ಮಿಯ ಮುಖ ಖುಷಿಯಿಂದ ಬೆಳಗಿತು. 

ಅಷ್ಟರಲ್ಲಿ ಗಂಗಾಳ ಆಗಮನವಾಯಿತು. ತನ್ನ ಬಟ್ಟೆ ಕಪಾಟಿನ ಸ್ವಚ್ಛತೆಯ ಅಭಿಯಾನಕ್ಕೆ ರಾಜ್ಯದಲ್ಲಿ ನೆರೆ ಹಾವಳಿ ಬಂದಾಗ ರಕ್ಷಣಾ ಪಡೆಗಳ ನೆರವು ಪಡೆದಂತೆ ತನ್ನ ರಾಶಿ ಬಟ್ಟೆಗಳನ್ನು ಜೋಡಿಸಿಕೊಡಲು ಪಮ್ಮಿ ಅಂದು ಗಂಗಾಳ ಸಹಾಯವನ್ನು  ಕೋರಿದ್ದಳು .

ಬಂದಾಕ್ಷಣವೇ ಲಗುಬಗೆಯಿಂದ ಕೆಮ್ಮುತ್ತಲೆ ಕೆಲ್ಸಕ್ಕೆ ಕೈಹಚ್ಚಿದ ಗಂಗಾ, ಪಮ್ಮಿ ಕೊಟ್ಟ ನೀರು ಕುಡಿದು ಸುಧಾರಿಸಿಕೊಂಡು  ”ಮೇಡಮ್ಮೋರೆ ಇವತ್ತು ಜ್ಯೋತಿ ಅಮ್ಮೋರ  ಮನೆ ಕೆಲಸ ಬುಟ್ಟ್ ಬುಟ್ಟೆ” ಕಟುವಾಗಿ ಹೇಳಿದಾಗ,  ”ಅಯ್ಯೋ ! ಯಾಕೆ ಗಂಗಾ?  ಪಾಪ! ಜ್ಯೋತಿ ಎಷ್ಟು ಒಳ್ಳೆಯವರು, ಅವರೆ ತಾನೇ ನಿನ್ನನ್ನು ನಮ್ಮ ಮನೆಕೆಲಸಕ್ಕೆ ಸೇರಿಸಿದ್ದು” ಪಮ್ಮಿ ಗಾಬರಿಯಾದಳು .

”ಇನ್ನೇನ್ ಮಾಡ್ಲಿ ಮತ್ತೆ ! ಹೊದ್ವಾರ ಅವರ ಮಗಳಿಗೆ ಇಷ್ಟ ಅಂತ ಎರಡು ಬೆಕ್ಕಿನ ಮರಿಗೋಳ್ನ ತಂದು ಸಾಕೊಂಡವರೆ ! ನನಗೆ ಅದರ ಕೂದಲು ಅಂದ್ರೆ ದಮ್ಮು ಬತ್ತದೆ.  ಆಗಾಕಿಲ್ಲ ಅಂತ ಯೇಳುದ್ರು ಕೇಳ್ಳಿಲ್ಲ. ಇವತ್ತು ಅದರಮ್ಮ ಬೇರೆ ಎರಡು ಇಲಿಗೋಳ್ಣ ಹಿಡಿದು ಮರಿಗೆ ತಂದು ಕೊಟ್ಟೈಯ್ತೆ! ಅವು ತಿಂದು ಅರ್ಧ ಬಿಟ್ಟಿದ್ದು ಕ್ಲೀನ್ ಮಾಡು ಅಂದ್ರೆ ಥೂ! ನಾನು ಮಾಡೋಕಾಯತ್ದಾ? ನೀವೇ ಯೇಳಿ. ಅದಕ್ಕೆ ಪೊರಕೆ ಎಸೆದು ಬೇರೆ ಯಾವ್ಳನಾದ್ರೂ ಕೆಲ್ಸಕ್ಕೆ ಇಟ್ಕೊಳ್ಳಿ , ನಾ ನಾಳೆಯಿಂದ ಬರಕಿಲ್ಲಾ ಅಂತ ಯೇಳ್ಬುಟ್ಟೆ ಅಮ್ಮೋರೆ” ಎಂದಾಗ ಪಮ್ಮಿ ಗರಬಡಿದವಳಂತೆ ನಿಂತಳು.

ಆಗ ಪರ್ಮಿಗಂತೂ ಮನೆ ಸಹಾಯಕಿ ಗಂಗಾ ಥೇಟ್ ತನ್ನನ್ನು ಕಾಪಾಡಲು ಅವತರಿಸಿದ ಗಂಗಾ ಮಾತೆಯಾಗಿ ಕಂಡಳು !

”ಕೀರ್ತಿ! ಆ ಕ್ಯೂಟ್ ಬೆಕ್ಕು ಮರಿ ಅಂದ್ರೆ  ತುಂಬಾ ಇಷ್ಟ ಕಣೆ, ಆದ್ರೆ ಏನ್ಮಾಡ್ಲಿ? ನನ್ನ ಗಂಡನಿಗೆ ಬೆಕ್ಕಿನ ಕೂದಲು ಅಂದ್ರೆ ಅಲರ್ಜಿ” ಕೋಣೆಯ ಮುಚ್ಚಿದ ಬಾಗಿಲಿನಿಂದ ಪಮ್ಮಿಯ ವಿವರಣೆಗಳನ್ನು ಕೇಳಿಸಿಕೊಂಡ ಪರ್ಮಿ ಮೀಸೆಯಡಿಯಲ್ಲಿ ತುಂಟ ನಗೆ ನಕ್ಕ.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter