ಶಿಕಾರಿಯ ಬೆನ್ನು ಹತ್ತಿ…..

ಹೆನ್ನಾಬೈಲಿನಲ್ಲಿ ಸುತ್ತ-ಮುತ್ತಲಿನ ಜನರಿಗೆ ‘ಬಾಷಾ  ಬಾಯಿ’ ಅಂದರೆ ಚಿರಪರಿಚಿತ ಹೆಸರು. ಅವರು ಕಮ್ಮಾರನಾಗಿದ್ದರೂ ಶಿಕಾರಿಯಲ್ಲಿ ಬಲು ಪ್ರವೀಣರಾಗಿದ್ದರು. ಅವರು ಇಟ್ಟ ಗುರಿಗೆ ಪ್ರಾಣಿಗಳು ತಪ್ಪಿಸಿಕೊಂಡದ್ದೇ ಅಪರೂಪ. ಊರಿನ ಅಡಿಕೆ ತೋಟ, ಗದ್ದೆಗಳಿಗೆ ಕಾಡು ಮೃಗಗಳು ನುಗ್ಗಿ ಉಪಟಳ ನೀಡಿದಾಗ ಬಾಷಾ ಬಾಯಿಗೆ ಕರೆ ಹೋಗುತಿತ್ತು . ಅವರು ಗಾಳಿಯಲ್ಲಿ ಗುಂಡು ಹಾರಿಸಿ, ಬೆದರಿಸಿ ಅವುಗಳನ್ನು ಕಾಡಿಗೆ ಅಟ್ಟುತ್ತಿದ್ದರು. ಕೆಲವೊಮ್ಮೆ ಇಂತಹ ಕೆಲಸಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯೇ ಅವರನ್ನು ಹುಡುಕಿಕೊಂಡು ಬರುತಿದ್ದರು. 

ಬಾಷಾ ಬಾಯಿ ಸ್ವಾರ್ಥಿಯಲ್ಲ. ಮರ ಕಳ್ಳತನವೋ, ಹುಲಿ ಕರಡಿಗಳನ್ನು ಕೊಂದು ಅವುಗಳ ಉಗುರು-ಚರ್ಮವನ್ನು ಮಾರುವ ಅಸಾಮಿಯೂ ಅಲ್ಲ. ಶಿಕಾರಿ ಅವರ ಪೂರ್ವಜರಿಂದ ಬಂದ ಬಳುವಳಿ. ಅದು ಅವರಿಗೆ ಅಚ್ಚುಮೆಚ್ಚು. ಅವರ ಕೈಯಲ್ಲಿರುವ ಬಂದೂಕು ಕೂಡ ಮನೆತನದಿಂದಲೇ ಬಂದ ಕೊಡುಗೆ.

ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅಪ್ಪ ಹೆನ್ನಾಬೈಲಿಗೆ ವರ್ಗವಾಗಿ ಹೋದಾಗ ನಾನು ತುಂಬಾ ಚಿಕ್ಕವ. ಬಾಷಾ ಭಾಯಿಗೆ ಆಗಲೇ ಐವತ್ತು ವರುಷಗಳು ದಾಟಿಕೊಂಡಿತ್ತು. ಅವರ ಶಿಕಾರಿಯ ಸಾಹಸಗಳನ್ನು ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರ ಯೌವನದ  ಹುಡುಕಾಟದ ಸಮಯದಲ್ಲಿ ಈ ಅರಣ್ಯ ಕಾಯಿದೆಗಳು ಅಷ್ಟೊಂದು ಕಠಿಣವಾಗಿರಲಿಲ್ಲ. ಹೆನ್ನಾಬೈಲು ಮೊದಲೇ ಕುಗ್ರಾಮದ ಕಾರಣ, ಈ ದಟ್ಟ ಕಾಡಿನಲ್ಲಿ ಒಂದೆರಡು ಶಿಕಾರಿ ಜರುಗಿದರೂ ಅದು ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಇಪ್ಪತ್ತು-ಮೂವತ್ತು ಮನೆಗಳಿರುವ ಈ ಹಳ್ಳಿಯಲ್ಲಿ ಶಿಕಾರಿ ಮಾಡಿದ ಮಾಂಸವನ್ನು ಎಲ್ಲರೂ ಸಮಾನವಾಗಿ ಹಂಚಿ ತಿನ್ನುತ್ತಿದ್ದರು. ಹೀಗಾಗಿ ಬಾಯಿ ಒರೆಸಿಕೊಂಡ ನಂತರ ದೂರು ಕೊಡುವವರೋ ಇರಲಿಲ್ಲ. ಅಲ್ಲದೇ ಊರಿನಲ್ಲಿ ಮದುವೆಗಳು ಜರುಗಿದಾಗ ಬಾಷಾ ಭಾಯಿಗೆ ವಿನಂತಿ ಹೋಗುತ್ತಿತ್ತು. ಅವರು ವಿವಾಹದ ಮೊದಲ ರಾತ್ರಿ ತನ್ನ ‘ಶಿಕಾರಿ ಪಟಾಲಮ್’ನೊಂದಿಗೆ ಕಾಡಿಗೆ ತೆರಳುತ್ತಿದ್ದರು.  ಕಾಡು ಕೋಣವೋ, ಎರಡು ಜೊತೆ ಜಿಂಕೆಗಳನ್ನೂ ಶಿಕಾರಿ ಮಾಡಿ ತರುತ್ತಿದ್ದರು. ಮರುದಿನ ಅದೇ ಮಾಂಸದ ಅಡುಗೆಯಲ್ಲಿ ಬಿಸಿಬಿಸಿ ತುಪ್ಪದ ಅನ್ನ! ದಾರಿ ಮಧ್ಯೆ ಕಾಡುಕೋಳಿಗಳು ಅಥವಾ ಮೊಲಗಳು ಸಿಕ್ಕರೆ ನವ ದಂಪತಿಗಳಿಗೆ ಅದೇ ಸ್ಪೆಷಲ್ ಫ್ರೈ!. 

ಬಾಷಾ ಭಾಯಿಯ ಜೊತೆಗೆ ನನ್ನ ಒಡನಾಟ ಬೆಳೆದಾಗ ನಾನು ಆರನೇ ತರಗತಿಯಲ್ಲಿದ್ದೆ. ರಜೆಯಲ್ಲಿ ಕಾರ್ಕಳದಿಂದ ಹೆನ್ನಾಬೈಲಿಗೆ ಹೋಗುತ್ತಿದ್ದ ನಾನು, ಆಗಾಗ ಬಾಷಾ ಭಾಯಿಯವರ ಮನೆಗೂ ಹೋಗುತ್ತಿದ್ದೆ. ಅವರ ಕಮ್ಮಾರ ಕೊಟ್ಟಿಗೆ ಮನೆ ಪಕ್ಕದಲ್ಲೇ ಇತ್ತು. ನಾನು ಅವರಲ್ಲಿ ಶಿಕಾರಿ ಕಥೆಗಳನ್ನು ಹೇಳಿ ಎಂದು ಪೀಡಿಸುತ್ತಿದ್ದೆ. ಆದರೆ ಅವರದೊಂದು ಶರ್ತ! ನೀನು ಬೆಂಕಿ ಕಾಯಿಸುವ ಕುಲುಮೆಯ ಹಗ್ಗವನ್ನು ಎಳೆಯುತ್ತಿರಬೇಕು. ನಿಲ್ಲಿಸಿದರೆ ಕಥೆಯೂ ನಿಲ್ಲುತ್ತದೆ. ಅಲ್ಲದೆ ಈ ವಿಷಯವನ್ನು ನಿನ್ನ ಅಪ್ಪ-ಅಮ್ಮಗೆ ಹೇಳಕೂಡದು. ನಾನು “ಹಾಗೇ ಆಗಲಿ. ಯಾರಿಗೂ ಹೇಳುವುದಿಲ್ಲ. ಕಥೆ ಹೇಳಿ” ಎಂದು ಒತ್ತಾಯಿಸುತ್ತಿದ್ದೆ. ಸಾಮಾನ್ಯವಾಗಿ  ಕುಲುಮೆಗೆ ಗಾಳಿ ಹಾಕುವ ಕಾರ್ಯವನ್ನು ಅವರ ಪತ್ನಿ ಮಾಡುತ್ತಿದ್ದರು. ಈಗ ನಾನು ಪುಕ್ಕಟೆಯಾಗಿ ಸಿಕ್ಕಾಗ, ಅವರನ್ನು ಮನೆಗೆಲಸಕ್ಕೆ ಅಟ್ಟುತ್ತಿದ್ದ ರು. ಬಾಷಾ ಭಾಯಿಯು ಶಿಕಾರಿ ಕಥೆಗಳ ಜೊತೆಗೆ ಕೆಲವು ದೈವದ ಕಥೆಗಳನ್ನೂ ಹೇಳುತ್ತಿದ್ದರು. ಅದನ್ನೂ ಸ್ವಾರಸ್ಯವಾಗಿ ವರ್ಣಿಸಿ, ಹಿಗ್ಗಿಸಿ ಹೇಳಿದಾಗ ರೋಮಾಂಚನವಾಗುತ್ತಿತ್ತು. ಆ ಕಥೆಗಳು ಎಷ್ಟು ಸತ್ಯವೋ-ಅಸತ್ಯವೋ ನನ್ನ ತರ್ಕಕ್ಕೆ ಅಗಾ ಬರುತ್ತಿರಲಿಲ್ಲ. ಆದರೆ ಕೇಳಲು ಮಾತ್ರ ಖುಷಿಯಾಗಿರುತ್ತಿದ್ದವು. 

ಹೆನ್ನಾಬೈಲು ಮೊದಲೇ ಕುಗ್ರಾಮ. ಸುತ್ತ-ಮುತ್ತಲು ದಟ್ಟಕಾಡು. ಕರೆಂಟ್ ಅನ್ನುವುದು ಇಲ್ಲವೇ ಇಲ್ಲ. ರಾತ್ರಿಯಾದರೆ ಘೋರ ಕತ್ತಲು. ಮನೆ ಎದುರಿನ ಕಾಡಂತೂ ದೈವಭೋತಗಳೇ ಎದ್ದು ನಿಂತಂತೆ ತೋರುತ್ತಿತ್ತು. ತಡ ರಾತ್ರಿಯಲ್ಲಿ ಮನೆಗೆ ಹಿಂತಿರುಗುವ ಜನರು, ದೊಂದಿಯನ್ನು ಹಿಡಿದು ದಾಪುಗಾಲು ಹಾಕುತ್ತಿದ್ದರು. ಮನೆಯ ಕಿಟಕಿಯ ಸರಳಿನ ಹಿಂದಿನಿಂದ ನೋಡುವ ನನಗೆ, ಅವರು ಕೊಳ್ಳಿ ದೈವದಂತೆ ಕಾಣುತ್ತಿದ್ದರು. ರಾತ್ರಿಯ ಕನಸಿನಲ್ಲೂ ಬಾಷಾ ಭಾಯಿ ಹೇಳಿದ ಭೂತಗಳ ಕಥೆಗಳ ಪಾತ್ರಗಳು ಬರುತ್ತಿದ್ದವು . ಕೆಲವೊಮ್ಮೆ  ನಿದ್ದೆಯೇ ಬರುತ್ತಿರಲಿಲ್ಲ. ಆದರೆ ಆ ಭಯದಲ್ಲೂ ಒಂದು ಸ್ವಾರಸ್ಯವಿತ್ತು, ರೋಮಾಂಚನವಿತ್ತು. ನಾನು ಮತ್ತೆ ಭಾಷಾ ಭಾಯಿಯಲ್ಲಿ ಹೋಗಿ ಇನ್ನೊಂದು ಕಥೆ ಹೇಳಿ ಎಂದು ಹಠ ಮಾಡುತ್ತಿದ್ದೆ. 

ಅವರು ಹೇಳಿದ ಹತ್ತಾರು ದೈವದ ಕಥೆಗಳು ಈಗಲೂ ನೆನಪಿದೆ. ಆದರೆ ಅದು ಇಸ್ಲಾಮಿನ ಧಾರ್ಮಿಕ ಚೌಕಟ್ಟಿನಲ್ಲಿ ಬಾರದ ಕಾರಣ ಅದನ್ನು ನನ್ನ ಯಾವುದೇ ಬರಹದಲ್ಲಿ ಪ್ರಸ್ತಾಪಿಸಿಲ್ಲ. ಇವತ್ತು ನಾನು ನಿಮ್ಮ ಸ್ವಾರಸ್ಯಕ್ಕೆ ಅಂತಹ ಒಂದು ಕಥೆ ಶಿಕಾರಿಯ ಇನ್ನೊಂದು   ಕಥೆಯನ್ನು ಬಿಚ್ಚಿಡುತ್ತಿದ್ದೇನೆ. ನಿಮಗೆ ಖುಷಿ ಅನಿಸಿದರೆ ತಿಳಿಸಿರಿ. ಅದನ್ನು ಮುಂದೆ ಹೇಳಿಕೊಳ್ಳುತ್ತೇನೆ. ಇಲ್ಲವಾದರೆ  ಬೇಡ. 

*    *    *   *   *

ಅದು ಅಮಾವಾಸ್ಯೆಯ ಆಸುಪಾಸಿನ  ದಿನಗಳು. ಶಿಕಾರಿಗೆ ಕತ್ತಲೆ ಇದ್ದರೇ ಸೂಕ್ತ. ಬಾಷಾ ಬಾಯಿ ಐದಾರು ತರುಣರ ಜೊತೆಗೆ ಕತ್ತಲ ಕಾಡನ್ನು ಭೇದಿಸುತ್ತಾ ಸಾಗಿದರು. ತಲೆಗೆ ಬೇಟೆಯ ಟಾರ್ಚ್ ಲೈಟನ್ನು ಕಟ್ಟಿದ್ದರು. ಹೆಗಲ ಮೇಲೆ ಬಂದೂಕಿತ್ತು. ಅವರ ಗ್ರಹ ಭಾರವೋ, ಪ್ರಾಣಿಗಳ ಅದೃಷ್ಟವೋ ಕೆಲವು ತಾಸುಗಳು ಸುತ್ತಿದರೂ ಯಾವುದೇ ಪ್ರಾಣಿಯ ಪತ್ತೆಯೇ ಇಲ್ಲ. ಒಂದೆರಡು ಮೊಲಗಳು ಕಂಡರೂ, ತುಂಬಿದ ದೊಡ್ಡ ಕಾಡಿಗೆ ಅದನ್ನು ನಷ್ಟ ಮಾಡುವುದು ಬೇಡ ಅನಿಸಿತು. 

ಆ ದಿನ ಅದೇಕೋ ಜಿಗಣೆಗಳ ಕಾಟ ಬೇರೆ. ಕೈ-ಕಾಲಿಗೆ ಅಂಟಿಕೊಂಡು, ರಕ್ತ ಹೀರುವ ಅವುಗಳನ್ನು ಬೇಗ ಬಿಡಿಸಿಕೊಳ್ಳದಿದ್ದರೆ ನೋವು ತಡೆಯಲಾಗದು. ಎಲ್ಲರೂ ಮನೆಗೆ ಹಿಂತಿರುಗುವುದೇ ಸರಿ ಅಂದರು. 

ಕಾಡ ದಾರಿ ಬಿಟ್ಟು ನಾಡ ದಾರಿಯನ್ನು ಹಿಡಿದ ಬಾಷಾ ಭಾಯಿಗೆ ದೂರದಲ್ಲಿ ಯಾರೋ ಬೆಂಕಿ ಹಾಕಿಕೊಂಡ ದೃಶ್ಯ ಕಾಣಿಸಿತು. ಹತ್ತಿರ ಹೋದರು. ಸುಮಾರು ಏಳೆಂಟು ಮಂದಿಯ ತಂಡವಿತ್ತು. ಅವರೂ ನಮ್ಮಂತೆ ಶಿಕಾರಿಗೆ ಬಂದವರು. ದೊಡ್ಡ ಕಾಟಿ (ಕಾಡೆಮ್ಮೆ) ಯನ್ನು ಹೊಡೆದು ಮಾಂಸ ಮಾಡಿದ್ದರು. ಜೊತೆಗೆ ಕಲ್ಲಿನ ಒಲೆ ಮಾಡಿಕೊಂಡು ಅಲ್ಲೇ ಅಡುಗೆ ಮಾಡುವ ತಯಾರಿ ನಡೆಸಿದ್ದರು. ಕೆಲವರು ಶಿಕಾರಿಗೆ ಬಂದಾಗ ಅಕ್ಕಿ ಮಸಾಲೆ ಜೊತೆಯಲ್ಲಿಯೇ ತರುವುದು ಸಾಮಾನ್ಯ. ಕಾಡಿನಲ್ಲಿಯೇ ಅದನ್ನು ಬೇಯಿಸಿ ತಿನ್ನುವುದು ಅವರ ಮೋಜು. ಒಂದು ರೀತಿಯ ಪಿಕ್‍ನಿಕ್!

ಈ ಶಿಕಾರಿಗಳ ಗಲಾಟೆಗೆ ಗುಂಡಿನ ಶಬ್ದಕ್ಕೆ ಬೆದರಿದ ಉಳಿದ ಪ್ರಾಣಿಗಳು ನಾಪತ್ತೆಯಾಗಿರುವುದು ಖಾತ್ರಿಯಾಯಿತು. ಬಾಷಾ ಭಾಯಿಯ ಹೆಗಲಿನಲ್ಲಿ ಬಂದೂಕು ಕಂಡ ಓರ್ವ “ನೀವು ಕೂಡ ಬೇಟೆಯಾಡಲು ಬಂದಿದ್ದೀರಾ? ಏನು ಸಿಕ್ಕಿತು?” ಎಂದು ಪ್ರಶ್ನಿಸಿದ. ಇವರು ವಿಷಾದದಿಂದ ತಾವು ಬರಿಗೈಯಲ್ಲಿ ಹೋಗುವ ನೈಜ ಸಂಗತಿಯನ್ನು ಹೇಳಿದರು. ಅವರಿಗೆ ಬೇಸರ ಅನಿಸಿತು. “ನೀವು ಕೂಡ ನಮ್ಮ ಜೊತೆಗೆ ಊಟ ಮಾಡಿಕೊಂಡು ಹೋಗಿ. ಅಕ್ಕಿ ಸಿದ್ಧವಿದೆ, ಮಾಂಸ ಬೇಯುತ್ತಿದೆ” ಅಂದರು. ಬಾಷಾ ಭಾಯಿಗೆ ಒಂದು ಅನುಮಾನ ಬಂತು. ಇವರು ನಮ್ಮ ಧರ್ಮದವರು ಅಲ್ಲ. ಹೀಗಾಗಿ ಹೊಡೆದು ಉರುಳಿಸಿದ ಕಾಟಿಗೆ ಚೂರಿಯಂತೂ ಹಾಕಿ ಇರಲಾರರು. ಹೀಗಾಗಿ ಅಲ್ಲಾಹನ ಹೆಸರಿನಲ್ಲಿ ‘ಜುಬಾ’ ಆಗದ ಪ್ರಾಣಿಯ ಮಾಂಸ ನಮಗಂತೂ ನಿಷಿದ್ಧ. ಅದಕ್ಕಾಗಿ ಅವರು ನಯವಾಗಿಯೇ ಬೇಡ ಅಂದರು. ಆದರೆ ಅವರು ಒಪ್ಪಲಿಲ್ಲ. ಒಂದಿಷ್ಟು ಮಾಂಸ ವಾದರೂ ಕೊಂಡು ಹೋಗಿ ಅಂದರು. ಇವರಿಗೆ ನಿರಾಕರಿಸಲಾಗಲಿಲ್ಲ. ಸರಿ ಎಂದು ಒಪ್ಪಿದರು. ಅವರು ಮೊದಲೇ ಇರಿಸಿಕೊಂಡಿದ್ದ ಬಾಳೆಯ ಎಲೆಯಲ್ಲಿ ಅದನ್ನು ಕಟ್ಟಿಕೊಟ್ಟರು. ಸುಮಾರು ಏಳೆಂಟು ಕೆಜಿಯ ಮಾಂಸವನ್ನು ಅವರು ತಾವು ತಂದಿದ್ದ ಚೀಲದಿಂದ ತುಂಬಿದರು. ಅವರ ಉಪಕಾರಕ್ಕೆ ಕೃತಜ್ಞತೆ ಹೇಳುತ್ತಾ ಊರಿನತ್ತ  ನಡೆದರು. 

ರಾತ್ರಿಯ ಎರಡು -ಮೂರು ತಾಸಿನ ವೇಳೆಗೆ ಮನೆ ಸೇರಿದ ಅವರು ಮೊದಲಾಗಿ ಜಿಗಣೆಗಳನ್ನು ಬಿಡಿಸಿಕೊಂಡರು. ಇನ್ನು ಮಾಂಸ ಕೆಡದಂತೆ ಅದಕ್ಕೆ ಹಳದಿ ಹುಡಿ ಮಿಶ್ರಣ ಮಾಡಲು ಅಣಿಯಾದರು. ದೊಡ್ಡ ಪಾತ್ರೆಯನ್ನು ತಂದು, ಅದಕ್ಕೆ ಅವರು ನೀಡಿದ ಮಾಂಸವನ್ನು ಸುರಿಸಿದರು. ಕೂಡಲೇ ಗಬ್ಬು ವಾಸನೆ ಮೂಗಿಗೆ ಬಡಿಯಿತು. ಏನೆಂದು ನೋಡಿದಾಗ ಕಾಡೆಮ್ಮೆಗಳ ಲದ್ದಿ ! ಇವರಿಗೆ ನಂಬಲು ಸಾಧ್ಯವಾಗಿರಲಿಲ್ಲ. ಮಾಂಸ ನೀಡಿದ್ದು ಇವರು ಪ್ರತ್ಯಕ್ಷ ನೋಡಿದ್ದಾರೆ. ಸೂರ್ಯ ಉದಯಿಸುವವರೆಗೆ ಕಾಯುತ್ತಾ ಕುಳಿತುಕೊಂಡರು. ಬೆಳಕು ಹರಿದಾಗ ಬಂದೂಕನ್ನು ಹೆಗಲೇರಿಸಿಕೊಂಡು ನಡೆದರು. ಜೊತೆಗೆ ತರುಣರೂ ಇದ್ದರು. ದಾಪುಗಾಲು ಹಾಕುತ್ತಾ ಅದೇ ನಿಖರವಾದ ಸ್ಥಳವನ್ನು ತಲುಪಿದರು. ಅಲ್ಲಿ ಬೆಂಕಿಯ ಕುರುಹಾಗಲಿ, ತಿಂದು ಬಿಸಾಕಿದ ಮಾಂಸಗಳ ಮೂಳೆಯಾಗಲಿ ಕಾಣಿಸಲಿಲ್ಲ. ಬರೇ  ಮೈದಾನವಿದೆ. ಅದು ಅಂತಿಂಥ ಮೈದಾನವಲ್ಲ. ಹೆಣಗಳನ್ನು ಸುಡುವ ಸ್ಮಶಾನ! ಬಾಷಾ ಭಾಯಿಗೆ ಕ್ಷಣಾರ್ಧದಲ್ಲಿ ಎಲ್ಲವೂ ಅರ್ಥವಾಯಿತು. ತಾವು ರಾತ್ರಿ ಈ ದೈವಗಳ ಜೊತೆಗೆ ಊಟ ಮಾಡುತ್ತಿದ್ದರೆ ಗತಿ ಏನಾಗುತ್ತಿತ್ತು ಎಂದು ಬೆಚ್ಚಿಬಿದ್ದರು. ತನಗೆ ತಾನು ನಂಬಿದ ಧರ್ಮವೇ ಕಾಪಾಡಿದ್ದು ಎಂದು ಮನವರಿಕೆಯಾಯಿತು. ಅಲ್ಲೇ ಅಲ್ಲಾಹನಿಗೆ ಕೈಯೆತ್ತಿ ವಂದಿಸಿದರು. ಜೊತೆಗಿದ್ದ ತರುಣರಿಗೆ ಕೈ ಕಾಲುಗಳು ನಡುಗಿತು. ಮನೆಗೆ ಮರಳಿ ಬಂದ ಬಳಿಕ ಅವರಿಗೆ ಐದಾರು ದಿನಗಳ ಚಳಿ ಜ್ವರ  ಹಿಡಿಯಿತು. ಬಾಷಾ ಭಾಯಿಯ ಈ ಕಥೆಗಳು ಸತ್ಯವೋ – ಸುಳ್ಳೋ ನನಗೆ ತಿಳಿದಿಲ್ಲ. ನನ್ನಲ್ಲಿ ಪುಕ್ಕಟೆಯಾಗಿ ದುಡಿಸಿಕೊಳ್ಳಲು ಅವರು ಹೇಳುತ್ತಿದ್ದ ಕಟ್ಟುಕಥೆಯೋ ತಿಳಿದಿಲ್ಲ. ಹೀಗಾಗಿ ಇದನ್ನು ನೀವು ನಂಬಬೇಡಿ. ಆದರೆ ಮುಂದೆ ಹೇಳುವ ಶಿಕಾರಿ ಕಥೆಯಂತೂ ಅಪ್ಪಟ  ಸತ್ಯ. 

*   *   *   *   *

ಸುಲೇಮಾನ್ ಭಾಯಿ ಅವರ ಮನೆಯಲ್ಲಿ ಮದುವೆ ಬಂತು. ಬಾಷಾ ಭಾಯಿ ಬಂದೂಕು ಎತ್ತಿಕೊಂಡರು. ಈ ಸಲ ತಂಡದಲ್ಲಿ ನಾಲ್ಕು ಮಂದಿ ಇದ್ದರು. ಅದರಲ್ಲಿ ಸಾಹುಕಾರರ ಮನೆಯ ಆಳು ಕರಿಯನೂ ಇದ್ದ. ಆತನಿಗೂ ಶಿಕಾರಿ ನೋಡುವ ಹುಚ್ಚು. ಬಾಷಾ ಭಾಯಿಗೆ ಕೆಲವು ಸಮಯದಿಂದ ಬೆನ್ನು ಬಿದ್ದಿದ್ದ. 

ಮಧ್ಯ ರಾತ್ರಿಯ ಜಾವ. ಹದವಾದ ತಿಂಗಳ ಬೆಳಕು ಕೂಡ ಇತ್ತು. ಬಾವಲಿ ಜೀರುಂಡೆಗಳ ಸದ್ದು ಬಿಟ್ಟರೆ ಇನ್ನಾವುದೇ ಶಬ್ಧವಿರಲಿಲ್ಲ. ಅದೇನು ಗ್ರಹಚಾರವೋ ಒಂದೆರಡು ಮಿಂಚುಗಳು ಸುಳಿದಾಡಿದವು. ಬಾಷಾ ಭಾಯಿಗೆ ನಿರಾಶೆ ಕಾಡಿತು. ಒಂದು ವೇಳೆ ಮಳೆ ಬಂದರೆ ಬಂದೂಕಿಗೆ ನೀರು ಬೀಳುತ್ತದೆ. ಶಿಕಾರಿ ಮಾಡುವಂತಿಲ್ಲ. ಶಿಕಾರಿ ಇಲ್ಲದಿದ್ದರೆ ನಾಳೆಯ ಅಡುಗೆಗೆ ಮಾಂಸವಿಲ್ಲ. ಆಗ ಮುಂಜಾನೆ ಅಬ್ಬು ಬ್ಯಾರಿಯವರನ್ನೇ ಎಬ್ಬಿಸಬೇಕು. ಅವರು ಸಾಕಿದ ಕುರಿಗಳಿಗೆ ಚೂರಿ ಹಾಕಬೇಕು. 

ಬಾಷಾ ಭಾಯಿ ಅಂದು ಮರದ ಕಾಂಡಕ್ಕೆ ಒರಗಿ ಕುಳಿತು ಬೀದಿ ಹಚ್ಚಿದರು. ಮಳೆ ಬರುವ ಮುನ್ನವೇ ಮನೆ ಸೇರಬೇಕೆಂಬ ಸಲಹೆ ನೀಡಿದರು. ಆದರೆ ಉಳಿದವರು ಒಪ್ಪಲಿಲ್ಲ. ಮುಂದಕ್ಕೆ ಹೆಜ್ಜೆ ಹಾಕುವ ಏನಾದರೂ ಸಿಕ್ಕಿಯೇ ಸಿಗುತ್ತದೆ ಎಂದು ದೈರ್ಯ ತುಂಬಿದರು. ಬಾಷಾ ಭಾಯಿ ಒಪ್ಪಿಕೊಂಡರು. ಕಲ್ಲು-ಮುಳ್ಳು, ಪೊದೆಗಳನ್ನು ದಾಟುತ್ತಾ, ಹಳ್ಳ, ದಿಣ್ಣೆಗಳನ್ನು ತಪ್ಪಿಸುತ್ತಾ ಸಾಗಿದರು. ಈಡು ತುಂಬಿದ ಕೋವಿಗಳು ಹೆಗಲ ಮೇಲೆ ಇತ್ತು. ಅದನ್ನು ಹಾಗೆ ಹೊತ್ತು ತಿರುಗುವುದು ಸುಲಭವಿಲ್ಲ. ತುಂಬಾ ಜಾಗ್ರತೆ ವಹಿಸಬೇಕು. ಅಪ್ಪಿತಪ್ಪಿ ಎಂದು ರೆಂಬೆ ಕೊಂಬೆಗೆ ಬಡಿದು ಸಿಡಿದರೆ ಪಕ್ಕದವನು ಖಲಾಸ್! ಇಂತಹ ಉದಾಹರಣೆಗಳು ಶಿಕಾರಿಯಲ್ಲಿ ಸಾಕಷ್ಟು ಜರುಗಿವೆ. 

ಅಷ್ಟರಲ್ಲಿ ಮಿಂಚು ಗುಡುಗು ಜೋರಾಗಿ ಅರ೦ಭವಾದವು. ಫಟೀರನೆ ಬಡಿಯುವ ಗುಡುಗುಗಳ ಶಬ್ಧಗಳಿಗೆ ದಟ್ಟ ಕಾಡಿನಲ್ಲಿ ಹೊಸ ಸಂಚಲನವೇ ಉಂಟಾಯಿತು. ಮಲಗಿಕೊಂಡ ಕೋತಿ ಮರಿಗಳು ಬೆಚ್ಚಿಬಿದ್ದವು. ಅವು ಒಂದು ಮರದಿಂದ ಇನ್ನೊಂದು ಮರಗಳಿಗೆ ಹಾರುವುದು ಮಿಂಚಿನ ಬೆಳಕಿನಲ್ಲಿ ಕಾಣುತಿತ್ತು.  ನೋಡು ನೋಡುತ್ತಿದ್ದಂತೆ ಮಳೆಯೂ ಆರಂಭವಾಯಿತು. ಎಲ್ಲರೂ ದಾಪುಗಾಲು ಹಾಕುತ್ತಾ ಹಳ್ಳಿ ಕಡೆ ಮುಖ ಮಾಡಿದರು. ಮೈ ಎಲ್ಲಾ  ಒದ್ದೆ. 

ಆ ವೇಳೆಯಲ್ಲಿ ಎಲ್ಲಿತ್ತೋ ಒಂಟಿ ಕಾಟಿ (ಕಾಡೆಮ್ಮೆ ) ಮುಖಾಮುಖಿಯಾಗಿ ಅಡ್ಡ  ನಿ೦ತು ಕೊಂಡಿತ್ತು. ಇವರ ಮೇಲೆ ದಾಳಿ ಮಾಡುವ ಸನ್ನಾಹದಲ್ಲಿ ಬುಸುಗುಡುತ್ತ ನೋಡಿತು. ಅಗಾ ಸಾಹಸಿ ಭಾಷಾ ಭಾಯಿಗೂ ಹೃದಯ “ಡವ ಡವ” ಬಡಿಯಲು ಆರಂಭಿಸಿತು. ಉಳಿದವರು ಭಯದಲ್ಲಿ ನಡುಗಲು ಪ್ರಾರ೦ಭಿಸಿದರು. ಕೋವಿಯಲ್ಲಿ ಗುರಿ ಹಿಡಿಯುವ ಅಂದರೆ ಅದು ಈ ಮಳೆಗೆ ಸಿಡಿಯುವ ಗ್ಯಾರಂಟಿಯಾಗಿ ಇಲ್ಲ. ಈಗ ದಿಕ್ಕೇ ತೋಚದಾಯಿತು. ಗುಂಪಾಗಿ ಬರುವ ಕಾಡೆಮ್ಮೆಗಳು ಸಾಮಾನ್ಯವಾಗಿ ಯಾವುದೇ ಅಪಾಯ ಮಾಡಲಾರವು. ಅದು ಒಂಟಿಯಾಗಿದ್ದಾರೆ ಮಾತ್ರ ತೀರಾ ಆಕ್ರಮಣಕಾರಿ. ಅದರಲ್ಲೂ ಅಕ್ಕಪಕ್ಕ ಮರಿಗಳಿದ್ದರೆ ಇನ್ನಷ್ಟು ಉಗ್ರರೂಪ ತಾಳುತ್ತದೆ. ಬಾಷಾ ಭಾಯಿ ಇರುವ ಎಲ್ಲಾ  ಧೈರ್ಯವನ್ನು ಒಟ್ಟುಗೂಡಿಸಿ ಪಿಸುಗುಟ್ಟಿದರು. “ನಾನು ಆಕಾಶಕ್ಕೆ ಗುಂಡು ಹಾರಿಸುತ್ತೇನೆ. ಕಾಟಿ ಓಡಲಿ ಅಥವಾ ಬಿಡಲಿ ನಾವಂತೂ ಅದರಿಂದ ತಪ್ಪಿಸಿಕೊಳ್ಳಬೇಕು. ಒಂದು ವೇಳೆ ಚದುರಿಕೊಂಡರೂ ಒಬ್ಬೊಬ್ಬರಾಗಿ ಬಂದು ಪಾಟೇಲರ ಗದ್ದೆಯ ಬಳಿಯಲ್ಲಿರುವ ಚಪ್ಪರದಲ್ಲಿ ಸಿಗಬೇಕು. ಓಡಲು ಅಸಾಧ್ಯ ಅನಿಸಿದರೆ, ಹತ್ತಿರದಲ್ಲಿ ಮರ ಕಂಡರೆ ಅದಕ್ಕೆ ಹತ್ತಿಕೊಂಡರೂ ಸರಿ! ಎಲ್ಲರೂ ದೇವನ ಮೇಲೆ ನಂಬಿಕೆ ಇಡಿ. ಏನೂ ಆಗದು… “. 

ದೂರದಲ್ಲಿ ನಿಂತ ಕಾಟಿ, ಮಿಂಚಿನ ಬೆಳಕಿನಲ್ಲಿ ಯಮದೂತನ ಕೋಣದಂತೆ ಕಾಣುತ್ತಿತ್ತು. ಯಾವಾಗ ದಾಳಿ ಮಾಡಲಿ ಎಂದು ಕ್ಷಣಗಣನೆ ಮಾಡುತ್ತಿತ್ತು. ಅಷ್ಟರಲ್ಲಿ ‘ಧಮಾಕ್ ‘ ಎನ್ನುವ ಒಂದೇ ಒಂದು ಶಬ್ದ ! ಕಾಡೆಮ್ಮೆ ಯಾರ ಬೆನ್ನು ಹತ್ತಿತೋ ತಿಳಿದಿಲ್ಲ. ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಟಕ್ಕಿತ್ತರು. ಯಾರೂ ಹಿಂತಿರುಗಿ ನೋಡಲಿಲ್ಲ. ಬದುಕಿದರೆ ಬೇಡಿ ತಿಂದೇವು ಎಂದು ಎಲ್ಲರೂ ಹಳ್ಳಿಯತ್ತ  ಓಡಿದರು. 

ಪಾಟೇಲರ ಗದ್ದೆಯಲ್ಲಿ ಹಾಕಿದ್ದ ಹಕ್ಕಿ ಕಾಯುವ ಚಪ್ಪರದತ್ತ ಒಬ್ಬೊಬ್ಬರಾಗಿಯೇ ಬಂದಾಗ “ಈ ಶಿಕಾರಿಗೆ ಬೆಂಕಿ ಬೀಳಲಿ” ಅನಿಸಿತು. ಎಲ್ಲರೂ ಬಂದರೂ ಕರಿಯ ಮಾತ್ರ ಕಾಣಿಸಲಿಲ್ಲ. ಕಾಟಿ ಆತನ ಬೆನ್ನು ಹತ್ತಿ ಕೊಂದು ಬಿಟ್ಟಿತೇ ಅನ್ನುವ ಅನುಮಾನ ಬಂತು. ಅಷ್ಟರಲ್ಲಿ ಸೂರ್ಯನೂ ಕಣ್ಣು ತೆರೆದುಕೊಂಡ. ಎಲ್ಲರೂ ಸೇರಿ ಮತ್ತೆ ಕಾಡಿನತ್ತ ಸಾಗಿದರು. “ಕರಿಯ ಕರಿಯ” ಎಂದು ಕಾಡು ಪ್ರತಿಧ್ವನಿಸುವಂತೆ ಕೂಗಿದರು. ಯಾವುದೇ ಉತ್ತರವಿಲ್ಲ. ಇನ್ನಷ್ಟು ಮುಂದಕ್ಕೆ ಹೋದರು. ಕೆಲವು ಫರ್ಲಾಂಗು ದಾಟಿದ ಬಳಿಕ “ನಾನು ಇಲ್ಲಿದ್ದೇನೆ ” ಎಂಬ ಪ್ರತಿಕೂಗು ಕೇಳಿಸಿತು. ಎಲ್ಲರಿಗೂ ಸಂತಸವಾಯಿತು. ಕೂಗಿನ ಜಾಡು ಹಿಡಿದೇ ಹೆಜ್ಜೆ ಹಾಕಿದರು. ಕರಿಯ ಮರದ ಮೇಲೆಯೇ ಇದ್ದ. ಭಯದಲ್ಲಿ  ಕಂಗಾಲಾಗಿದ್ದ. ಆತನಿಗೆ ಈ ಶಿಕಾರಿಯ ಸಹವಾಸವೇ ಬೇಡ ಅನಿಸಿತು. ಅವನು ರಾತ್ರಿ, ಈ ಓಡುವ ಉಪಾಯಕ್ಕಿಂತ ಮರ ಹತ್ತುವ ತಂತ್ರವೇ ಸರಿ ಎಂದು ಮರ ಹತ್ತಿ ಕೂತಿದ್ದ. ಕಾಡೆಮ್ಮೆ ಎಲ್ಲಿ ಹೋಯಿತೆಂದು ಆತನಿಗೂ ತಿಳಿಯದು. ಎಲ್ಲರೂ ಹಿಂದಕ್ಕೆ ಹೊರಟರು. ನೇರವಾಗಿ ಮದುವೆ ಮನೆಗೆ ಹೋಗಿ ತಮ್ಮ ಕೆಟ್ಟ ಅನುಭವವನ್ನು ಅವರಲ್ಲಿ ಹೇಳಿಕೊಂಡರು. ಅಲ್ಲಿಯ ಮನೆ ಮಂದಿ  ಬೆಚ್ಚಿಬಿದ್ದರು. ಸುಲೇಮಾನ್ ಭಾಯಿ ಮಾತ್ರ ತಡ ಮಾಡಲಿಲ್ಲ. ಅಬ್ಬು ಬ್ಯಾರಿಯವರ ಕುರಿಗಳಿಗೆ ಶರಣು ಹೋದರು.  

********


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter