ನೀರವರಾತ್ರಿಗಳ ನೇವರಿಸುತ್ತ
ಹಗಲುಗನಸುಗಳಿಗೆ ಹೆಗಲುಕೊಡುತ್ತ
ನಗುವ ಮುಚ್ಚಿಟ್ಟು ಹೆಣ್ಣಾಗುತ್ತದೆ ಒಮ್ಮೆ
ಒಮ್ಮೊಮ್ಮೆ ಕಲ್ಲಿನಂಥ ಗಂಡಸು!
ಕಾಲೂರಿ ಕುಳಿತವರ ಅಂಗಾಲುಗಳು
ತೇವಗೊಳ್ಳುವ ಹೊತ್ತು
ಜಾರಿಬಂದಿದೆಯೊಂದು ದೋಣಿ
ಕಡಲೆದೆಯ ಕನಸೇ ತೇಲಿಬಂದಂತೆ
ಮರಳಮೇಲೊಂದು ಕನಸಹೆಜ್ಜೆಯ ಗುರುತು!
ಕಡೆಗಣಿಸುವ ಕಲ್ಲಿನೆದೆಯಲ್ಲೂ
ಇರಬಹುದೊಂದು ಕನಸು;
ಕನಸಕಾಯುವ ಕಣ್ಣು!
ತಣ್ಣನೆಯ ತೆರೆಯೊಂದು ಹತ್ತಿರ ಬಂದು
ಹಗುರಾಗಿ ಮರಳುತ್ತದೆ
ಮೈಗಂಟಿದ ಹನಿಯೊಂದು ಮೆಲ್ಲಗೆ ಜಾರಿ
ಕಡಲಿನೆಡೆಗೆ ಸಾಗುತ್ತದೆ
ಕಲ್ಲಿಗೂ ಇರಬಹುದು ಹನಿಯಂತೆ ಹಗುರಾಗಿ
ಕಡಲ ಸೇರುವ ತವಕ!
ಮುಂಜಾವಿನಲಿ ದಡವ ಸೇರಿದ ಬೀಜವೊಂದು
ಮುಸ್ಸಂಜೆಯಲಿ ಮೊಳಕೆಯೊಡೆದಿದೆ
ಬೇರೂರೀತೇ ಚಿಗುರಿನ ಬಯಕೆ
ಕಲ್ಲಿನ ಮೈಯ ಕಸುವಿನಲ್ಲಿ;
ಹಬ್ಬಿಕೊಂಡೀತೇ ಹಂಬಲದ ಹಂದರ
ಕಣ್ಣೆವೆಗಳ ಮೇಲೆ!
ನಿಟ್ಟುಸಿರಿಗೂ ಕಿವಿಯಾಗಬೇಕಿದೆ ಕಲ್ಲು;
ಊರಿದ ಕೈಗಳ ಸಂತೈಸಬೇಕಿದೆ
ಕಡಲಿನಾಚೆಗೂ ನಾಟಿದ ದೃಷ್ಟಿಗಳ ಹಿಂಬಾಲಿಸಿ
ಆತುಕುಳಿತ ನೆರಳುಗಳ
ತಲುಪಿಸಬೇಕಿದೆ ಆಚೆದಡಕ್ಕೆ
ಹೊಟ್ಟೆಯೊಳಗಿನ ಮಾತು
ಹರಿದ ಚಪ್ಪಲಿ
ಆವಿಯಾಗದ ಮೌನ
ಯಾರೋ ಹಾಸಿದ ಕರವಸ್ತ್ರ
ಎಲ್ಲ ಉಳಿದುಹೋಗಿವೆ
ಅಪ್ಪಳಿಸಬಹುದೊಂದು ಅಲೆ;
ಹೊತ್ತೊಯ್ಯಬಹುದು ಎಲ್ಲ ಸರಕುಗಳ
ಅಪ್ಪಣೆಯಿಲ್ಲದೆ!