ಒಂದು ಎಳೆ ಸತ್ಯದ ತಲೆಯ ಮೇಲೆ, ಸಾವಿರ ಘನ ಸುಳ್ಳಿನ ಸವಾರಿ
ಹೆಣ್ಣಿನ ಮಡಿ ಮುಟ್ಟು ಪುರಾಣ, ಅನಗತ್ಯ ಪುರುಷ ಪ್ರಣಾಳಿಕೆ ಪಕ್ಕಕ್ಕಿರಲಿ
ಮನಸು ಮನಸುಗಳ ನಡುವೆ ಕಣಿವೆ ಕಂದರ ಅಗೆವ ಕಪಟ ಹುನ್ನಾರ
ಗದ್ದುಗೆ ಗುರಿಗೆ ದೇಶಭಕ್ತಿ ಬೆರೆಸಿ ಬೀಗುವ, ಪುಕ್ಕಟೆ ಹಲ್ಲಾಗುಲ್ಲಾ ಪಕ್ಕಕ್ಕಿರಲಿ
ಮೌಢ್ಯದ ಕಿರೀಟ ಧರಿಸಿ, ಬೌದ್ಧಿಕ ದಿವಾಳಿಯಾಗುವವರದ್ದೇನು ಕಥೆ
ಆಧುನಿಕತೆಯ ವ್ಯಸನದಲಿ, ವಿಕಾರತೆಯ ನಗ್ನ ನರ್ತನ ಪಕ್ಕಕ್ಕಿರಲಿ
ದೇಶದ ಬೆನ್ನೆಲುಬೆಂದು ಸುಳ್ಳು ಸುಳ್ಳೇ ಪುಸಲಾಯಿಸಿದ, ರೈತರ ಆತ್ಮಹತ್ಯೆ ಗೋಳು
ಪರಿಹಾರ ಕಾದು ಕಾದು ಬಡ ಪರಿವಾರ, ಬೀದಿ ಪಾಲಾಗುವ ಪರಿ ಪಕ್ಕಕ್ಕಿರಲಿ
ಪ್ರಗತಿಯ ಹೆಸರಲಿ ಡಿಜಿಟಲ್ ದುನಿಯಾ, ಮುಗಿಲು ಮುಟ್ಟುವ ಕಾಂಕ್ರೀಟ್ ಕಾಡು
ಹಸಿರು ಪೈರಿಲ್ಲದೆ ಹಸಿವು ತಣಿವುದೆಂತು, ಬೋಳು ಬಯಲ ತರ್ಕ ಪಕ್ಕಕ್ಕಿರಲಿ
ಕೈ ಹಿಡಿದು ಮೈದಡವಿ ಎದೆಗಾನಿಸಿಕೊಂಬ, ನನ್ನರಿವೇ ನನ್ನಾತ್ಮ ಬಂಧು
ಇಳೆಯ ಒಡಲಿಗೆ ನಭದ ಬಯಲಿಗೆ, ಬೇಲಿ ಕಟ್ಟುವವರ ಮಾತು ಪಕ್ಕಕ್ಕಿರಲಿ
1 thought on “ಹೀಗೊಂದು ಗಝಲ್…”
ಅಬ್ಬಾ! ಒಣ ಆಧುನಿಕತೆ, ಅಮಾನವೀಯತೆಯನ್ನು ಬೆತ್ತಲು ಗೊಳಿಸುವ ಕಾವ್ಯ…ತ್ರಾಸಿ ಅವರಿಗೆ ಅಭಿನಂದನೆ ಸರ್…