ಯಾವ ಹಕ್ಕಿಯ ಕೊರಳ ದನಿಯದು
ಭಾವ ತಂತಿಯ ಮೀಟಿದೆ
ಎನ್ನ ಎದೆಯಾ ಭಾವ ವೀಣೆಯ
ಒಲವ ಸರಿಗಮ ನುಡಿಸಿದೆ
ದಿಕ್ಕುಗಳ ಹಣೆಯ ಚುಕ್ಕಿಯಂತೆ
ಮನದಿ ಹಣತೆಯು ಬೆಳಗಿದೆ
ಮಂಕು ಕವಿದಿಹ ಎನ್ನ ಮನದಲಿ
ಪ್ರೇಮೋದ್ದೀಪನಗೊಳಿಸಿದೆ
ಕಮಲಾಕ್ಷಿಯಾಗಿ ಬಾನ ನೋಡುವ
ಕೊಳದಂತೆ ಮನವಾಗಿದೆ
ಮನದ ದಂಡೆಯ ತುಂಬ ಸುಮಧುರ
ಸುಮಗಳರಳಿ ನಿಂತಿದೆ
ಸೊಟ್ಟಪಟ್ಟ ಗದ್ದೆ ಸೀಳಿ ಚಲಿಸುವ
ಪವನದಂತೆ ಎನ್ನ ಮನವಾಗಿದೆ
ಇಂದು ಮುಂದೆಂದು ಸದಾ ನಲ್ಲನ
ತೆಕ್ಕೆಯ ಮನ ಹಂಬಲಿಸಿದೆ
ಬಾರೋ ನೀನು ಹೃದಯವೀಣೆಯ
ಮಿಡಿದ ಎನ್ನಾ ಮಾಂತ್ರಿಕ
ಮನದ ಕತ್ತಲೆಯ ಕೆಸರ ತಳದಿ
ಮಿನುಗುವ ವಜ್ರ ಮಾಣಿಕ