ಕೊರೋನಾ ಮತ್ತು ಗೃಹ ಸ್ವಚ್ಛತಾ ಅಭಿಯಾನ

ನೀವು ಪತ್ನಿಯರ ವಿವಿಧ ರಗಳೆಗಳ ವಿಚಾರಗಳನ್ನು ಕೇಳಿರಬಹುದು. ವಾಚಾಳಿ, ಜಗಳಗಂಟಿ, ಸಂಶಯ ಪಿಶಾಚಿ, ಪತಿಪೀಡಕಿ, ಪಾತ್ರೆ-ಪಗಡಿಗಳನ್ನು ಎಸೆಯುವ ಕೋಷಿಷ್ಟೆ, ಗಂಡನ ಜುಟ್ಟು ಹಿಡಿದು ಬಡಿಯುವ ದುಷ್ಟೆ ಇತ್ಯಾದಿ ಇತ್ಯಾದಿ… ಆದರೆ ನನ್ನ ಪತ್ನಿಯಂತೂ ಹಾಗಿಲ್ಲ. ಆಕೆಯ ಒಂದೇ ಒಂದು ಸಮಸ್ಯೆ ಅಂದರೆ ಶುಚಿತ್ವಕ್ಕೆ ನೀಡುವ ಮಹತ್ವ! ದಿನನಿತ್ಯ ಬಟ್ಟೆ, ಪಾತ್ರೆಗಳಿಂದ ಹಿಡಿದು ನೆಲ, ಕಿಟಕಿ, ಬಾಗಿಲುಗಳವರೆಗೆ ಎಷ್ಟು ತೊಳೆದರೂ, ಉಜ್ಜಿದರೂ ತೃಪ್ತಿಯಿಲ್ಲ. ಅವು ಚಕಚಕನೆ ಹೊಳೆಯುತ್ತಲೇ ಇರಬೇಕು. ಏಕೋ ಏನೋ ಈ ಕಾಯಕ ಆಕೆಗೆ ಬಹಳ ಇಷ್ಟ. ಅದು ನಿತ್ಯ – ನಿರಂತರ!

ಇದೀಗ ಈ ಗಂಡಾತರದ ನಡುವೆ, ಕೊರೋನಾ ಎಂಬ ಮಹಾಮಾರಿಯೂ ಅಪ್ಪಳಿಸಿಬಿಟ್ಟಿದೆ. ಹಗಲು-ರಾತ್ರಿ ಟೆಲಿಫೋನಿನಿಂದ ಹಿಡಿದು ಟಿ.ವಿ., ಪತ್ರಿಕೆಗಳವರೆಗೆ ಅದರದ್ದೇ ರಾಗ – ಕೊರೆತ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ, ಸಾಮಾಜಿಕ ಅಂತರ ಇರಿಸಿ, ಶುಚಿತ್ವ ಕಾಪಾಡಿ, ಕೊರೋನಾವನ್ನು ಹರಡದಂತೆ ತಡೆಯಿರಿ…….ಇತ್ಯಾದಿ ಅಬ್ಬರದ ಎಚ್ಚರಿಕೆಗಳು. ನನ್ನ ಪತ್ನಿಗಂತೂ ವಿಚಾರ ನೇರವಾಗಿ ಬೆಂಕಿಯ ಮೇಲೆ ತುಪ್ಪ ಸುರಿದಂತೆ ಆಯಿತು. ಮೊದಲೇ ಸ್ವಚ್ಛತೆಯ ಪೆಡಂಭೂತ ಹಿಡಿದಿರುವ ಆಕೆಗೆ ಇನ್ನು ಶುಚಿತ್ವದ ಬಗ್ಗೆ ಹೇಳಬೇಕೆ? ಬೆಚ್ಚಿಬಿದ್ದ ಆಕೆ ಎಲ್ಲವನ್ನೂ ಸತ್ಯವೆಂದೇ ನಂಬಿಬಿಟ್ಟಿದ್ದಾಳೆ ಪಾಪ!

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈ ಕೊರೋನಾ ದಾಳಿ ಇಟ್ಟ ಒಂದು ತಿಂಗಳಲ್ಲೇ ನಮ್ಮ ಮನೆಯಲ್ಲಿ ಮೂರು ಲೀಟರ್ ಡೆಟಾಲ್ (Dettol) ಮುಗಿದು ಹೋಗಿದೆ. ಈ ಹಿಂದೆ ಸಾಮಾನಿನ ಚೀಟಿಯಲ್ಲಿ ಅದೆಲ್ಲೊ ಅಡಗಿಕೊಂಡಿರುತ್ತಿದ್ದ ಈ ಡೆಟಾಲ್, ಕೊರೋನಾ ದೆಸೆಯಿಂದ ‘ಟಾಪ್‌ಟೆನ್’ ಸ್ಥಾನಕ್ಕೆ ಏರಿ ನಿಂತಿದೆ. ಕೊರೋನಾದ ಸೋಂಕಿಗೆ ಡೆಟಾಲ್ ಸೂಕ್ತ ಅನ್ನುವ ನಂಬಿಕೆ ವಿಶ್ವದ ಎಲ್ಲೆಡೆ ಹರಡಿಕೊಂಡಿತ್ತು. ಹೀಗಾಗಿ ಬೇರೆ ಕಂಪೆನಿಗಳ ವ್ಯಾಪಾರ-ವಹಿವಾಟುಗಳು ತಣ್ಣಗೆ ಮಲಗಿದರೆ, ಡೆಟಾಲ್ ವ್ಯಾಪಾರವಂತೂ ಭರ್ಜರಿಯಾಗಿ ಸಾಗುತ್ತಿದೆ. ಪರಿಣಾವಾಗಿ ಇದರ ಸ್ಟಾಕ್ ಎಲ್ಲೆಡೆ ಕಾಣಿಸುವುದೇ ಅಪರೂಪವಾಗಿದೆ. ನಾನು ಪರ್ಯಾಯವಾಗಿ ಬೇರೆ ಬ್ರ್ಯಾಂಡ್ ತಂದರೆ ನನ್ನ ಪತ್ನಿಯಂತೂ ಸುತರಾಂ ಒಪ್ಪಿಕೊಳ್ಳಲೇ ಇಲ್ಲ. ಇಂತಹ ಸಂದಿಗ್ಧ ಕಾಲದಲ್ಲಿ ನಾವು ಕಳಪೆ ಗುಣಮಟ್ಟದ ಬ್ರ್ಯಾಂಡ್‌ನ ಜೊತೆಗೆ ರಾಜಿ ಮಾಡಿಕೊಂಡರೆ ಹೇಗೆ? ಅದು ಸಾಚಾವೋ, ನಕಲಿಯೋ ಬಲ್ಲವರು ಯಾರು? ದಯವಿಟ್ಟು ಬದಲಾಯಿಸಬೇಡಿ. ಅದನ್ನೇ ಮುಂದುವರಿಸಿರಿ. ಹುಡುಕಿ ಎಂದು ಆಜ್ಞಾಪಿಸಿದಳು.

ಡೆಟಾಲ್ ಕಂಪೆನಿಯ ಅದೃಷ್ಟವೋ, ನನ್ನ ಗೃಹಚಾರವೋ ಏನೋ, ನಾನು ಡೆಟಾಲ್‌ಗಾಗಿ ಹತ್ತಾರು ಸೂಪರ್ ಮಾರ್ಕೆಟ್‌ಗಳನ್ನು ಸುತ್ತಾಡಿದೆ. ಅಲ್ಲಿದೆ-ಇಲ್ಲಿದೆ ಅನ್ನುತ್ತ ಹಲವಾರು ಪ್ರದಕ್ಷಿಣೆಗಳನ್ನು ಹಾಕಿದೆ. ಕೊನೆಗೆ ಹೇಗೋ ಎಲ್ಲೋ ಅದನ್ನು ಒಂದು ಕಡೆಯಿಂದ ದಕ್ಕಿಸಿಕೊಂಡು ಆಕೆಯ ಕೈಗೆ ಕೊಟ್ಟಾಗ ಅವಳ ಸಂತೋಷವಂತೂ ಹೇಳತೀರದು. ಏಳೆಂಟು ಪವನಿನ ಬಂಗಾರದ ಸರವನ್ನು ಆಕೆಯ ಕುತ್ತಿಗೆಗೆ ಕಟ್ಟಿದರೂ ಕಾಣದಂತಹ ಆನಂದ! ಅದರ ಜೊತೆಗೆ ಯಾರಿಗೂ ಸಿಗದದ್ದು ನಮಗೆ ಸಿಕ್ಕಿತು ಎಂಬ ಶಹಭಾಷ್‌ಗಿರಿ ಬೇರೆ. ‘ನನಗೆ ಖಂಡಿತ ಗೊತ್ತಿತ್ತು. ನೀವು ನನಗಾಗಿ ಎಲ್ಲಿದ್ದರೂ ಈ ಡೆಟಾಲ್‌ನ್ನು ಹುಡುಕಿ ತಂದೇ ತರುತ್ತೀರಿ’ ಎಂಬ ಶ್ಲಾಘನೆ.

ಈ ದುಬಾಯಲ್ಲಿ ಬಂದು ನೆಲೆ ನಿಂತ ಪ್ರತಿಯೊಬ್ಬರಿಗೂ ತಮ್ಮದೇ ಆದ  ಮಹತ್ವದ ಕನಸುಗಳಿರುತ್ತವೆ. ಕೆಲವರಿಗೆ ಲಕ್ಷಗಟ್ಟಲೆ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಬೇಕು, ಎರಡು – ಮೂರು ಅಂತಸ್ತಿನ ಭವ್ಯ ಮನೆಯನ್ನು ನಿರ್ಮಿಸಬೇಕು. ಇಡೀ ಜಗತ್ತನ್ನು ಸುತ್ತಿ ಬರಬೇಕು, ಊರಿನಲ್ಲಿ ದೊಡ್ಡದಾದ ಕಾಂಪ್ಲೆಕ್ಸ್ ಕಟ್ಟಿಸಬೇಕು ಇತ್ಯಾದಿ ಇತ್ಯಾದಿ… ಆದರೆ ನನ್ನ ಕನಸೇ ಬೇರೆ. ಕಛೇರಿಯ ಈ ದಿನನಿತ್ಯದ ಜಂಜಾಟ-ಒತ್ತಡಗಳಿಂದ ಮುಕ್ತಿ ಪಡೆದು ಒಂದು ತಿಂಗಳು ರಜೆ ಪಡೆಯಬೇಕು. ಮನೆಯಲ್ಲಿ ಪತ್ನಿ – ಮಕ್ಕಳ ಜೊತೆಗೆ ಹಾಯಾಗಿ ಇರಬೇಕು. ಇದಕ್ಕಾಗಿ ಅನೇಕ ಬಾರಿ ನಮ್ಮ ಬಾಸ್‌ನ ಬಳಿ ಹೋಗಿ ಅರ್ಜಿ ಗುಜರಾಯಿಸಿದ್ದೆ. ಆದರೆ ಸ್ವಯಂ ಅವರಿಗೇ ಕುಂಡೆ ತುರಿಸಲು ಸಮಯವಿಲ್ಲದ ಈ ಕಛೇರಿಯಲ್ಲಿ ನನಗೆ ರಜೆ ಕೊಡುತ್ತಾರಾ? ನನ್ನ ಅರ್ಜಿಗೆ ಯಾವತ್ತೂ ಅನುಮೋದನೆ ಸಿಗಲೇ ಇಲ್ಲ.

ಆದರೆ ಈಗ ಕೊರೋನಾ ಅಪ್ಪಳಿಸಿದ ನಂತರ ಹೊಸ ಆದೇಶವೇ ಬಂತು. ಒಂದು ತಿಂಗಳು ಯಾರೂ ಕಛೇರಿಗೆ ಕಡ್ಡಾಯವಾಗಿ ಬರಬಾರದು. ಏನಿದ್ದರೂ ಮನೆಯಿಂದಲೇ ಕೆಲಸ ಮಾಡಬೇಕು. ಬಂದರೆ ದೊಡ್ಡ ಮೊತ್ತ ದಂಡ ವಿಧಿಸಲಾಗುವುದು ಎಂದು ಸರಕಾರವೇ ಆಜ್ಞೆ ಹೊರಡಿಸಿತು.

ಒಂದು ತಿಂಗಳ ಲಾಕ್ಡೌನ್ಗೆ ರಜೆ ಮಾತ್ರವಲ್ಲ, ಪುಕ್ಕಟೆ ವೇತನವೂ ದೊರೆಯಿತು. ಆದರೆ ಇಂತಹ ಘೋರ ಕಾಯಿಲೆಯ ರಜೆ ಬೇಕಿತ್ತೇ? ಹೊರಗಡೆ ಹೋಗುವಂತಿಲ್ಲ, ಸಿನೇಮಾ ನೋಡುವಂತಿಲ್ಲ, ಸ್ನೇಹಿತರನ್ನು ಭೇಟಿಯಾಗುವಂತಿಲ್ಲ. ನಿರಪರಾಧಿಯನ್ನು ಜೈಲಿನಲ್ಲಿ ಕೂಡಿ ಹಾಕಿದ ಅನುಭವ. ಬದುಕೇ ಶರಪಂಜರ!

ಇದೀಗ ನಾನು ನನ್ನಾಕೆಯ ಸ್ವಚ್ಛತಾ ಅಭಿಯಾನದ ‘ಉಸ್ತಾದ್’ ಆಗಿ ನನ್ನ ಪತ್ನಿಯ ಕೈಗೆ ಸುಲಭವಾಗಿ ಸಿಕ್ಕಿಬಿದ್ದೆ. ನಿರಾಯಾಸದಿಂದ ಸ್ವಚ್ಛತಾ ಅಭಿಯಾನದ ಅಧ್ಯಕ್ಷನಾಗಿ ಬಿಟ್ಟೆ. ಮನೆಯ ಎ.ಸಿ. ಫಿಲ್ಟರ್ (Filter) ನಿಂದು ಹಿಡಿದು, ಅಡುಗೆ ಮನೆಯ ಗ್ಯಾಸ್ ಸಿಲಿಂಡರ್‌ನ ತಳಬಾಗದ ಸಾಫ್-ಸಫಾಯಿಗೆ ನಾನೇ ಹೊಣೆಯಾದೆ. ತಿರುಗುವ ಫ್ಯಾನಿನ ರೆಕ್ಕೆಗಳಿಂದ ಹಿಡಿದು ಹೊರಗಿನ ಶೂ ರ್‍ಯಾಕಿನ ಪಾದರಕ್ಷೆಗಳ ಪಾಲಿಶ್‌ವರೆಗೂ ನಾನೇ ಕ್ಲಿನಿಂಗ್ ಮಾಸ್ಟರ್ ಆದೆ. ಈ ಪುಕ್ಕಟೆ ಕಾಯಕಕ್ಕೆ ರಜೆ ಇಲ್ಲ, ಸಂಬಳವಿಲ್ಲ, ಊಟವೇ ವೇತನ. ಬರೇ ಕತ್ತೆ ದುಡಿತ. ಆ ದಿನದ ಕಛೇರಿಯಲ್ಲಿ ನನ್ನ ಕೈಕೆಳಗಿನ ಉದ್ಯೋಗಿಗಳಿಗೆ ‘ಅದು ಮಾಡು – ಇದು ಮಾಡು’ ಎಂಬ ಆದೇಶ ಹೊರಡಿಸುತ್ತಿದ್ದೆ. ಅದನ್ನು ಅವರು ತುಟಿಪಿಟಿಕ್ ಅನ್ನದೆ ಓಕೆ ಸರ್ ಎಂದು ಪಾಲಿಸುತ್ತಿದ್ದರು. ಆದರೆ ಈಗ ಮನೆಯಲ್ಲಿ ಹಾಗಿಲ್ಲ. ಎಲ್ಲವೂ ಗೃಹ ಸಚಿವೆಯ ಅಪ್ಪಣೆಯ ಮೇರೆಯಂತೆಯೇ ನಡೆಯಬೇಕು, ಆಕೆಯ ಆಜ್ಞೆಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಆ ಸುಪ್ರಭಾತ, ಆ ಕಠಿಣ ಶ್ಲೋಕಗಳು, ಆ ಭಾಷಣಗಳು ಕೇಳಿಸಿಕೊಳ್ಳಲು ತಯಾರಿರಬೇಕು. ಸ್ವಚ್ಛತೆಯಲ್ಲಿ ಸಾಸಿವೆ ಕಾಳಿನಷ್ಟು ಲೋಪ ಕಂಡುಬಂದರೂ ಇದರಿಂದಲೇ ಕೊರೋನಾ ಬಂದೇ ಬಿಟ್ಟಿತು ಎನ್ನುವಂತಹ ಎಚ್ಚರಿಕೆ ಪ್ರತ್ಯೇಕ! ಈ ರಗಳೆ ಪುರಾಣಗಳಿಗೆ ಬೇಸತ್ತು ಹೊರಗಡೆ ಹೋಗುವಂತೆಯೂ ಇಲ್ಲ. ಅಲ್ಲಿ ಪೋಲಿಸರ ಕಾಟ! ನಿಜಕ್ಕೂ ನಮ್ಮ ಸುಂದರವಾದ ಬದುಕು ಎಂಬ ಕಾಡುಪಾಪವನ್ನು ಪಂಜರದಲ್ಲಿ ಕೂಡಿ ಹಾಕಿದಂತೆ ಆಯಿತು! ಕೆಲವೊಮ್ಮೆ ಸೋಫಾದಲ್ಲಿ ಕೂತು ಕಣ್ಣು ಮುಚ್ಚಿ ಆಲೋಚಿಸಿದಾಗ, ಇದು ನಮ್ಮ ಯಾವುದೋ ಸಿಬ್ಬಂದಿಯ ಹಿಡಿ ಶಾಪವೇ ಆಗಿರಬಹುದೆಂದು ಯೋಚನೆ ಬರುತ್ತಿತ್ತು. ಏಕೆಂದರೆ ಕಲಿಯುಗದಲ್ಲಿ ನಮ್ಮ ಕರ್ಮಗಳಿಗೆ ಈ ಜನ್ಮದಲ್ಲಿಯೇ ಶಿಕ್ಷೆ ದೊರೆಯುತ್ತದೆಯಂತೆ!

ಅಂತೂ-ಇಂತೂ ಸರಕಾರವು ಲಾಕ್‌ಡೌನಿನ ಅವಧಿಯನ್ನು ಮುಗಿಸುವ ದಿನಾಂಕವನ್ನು ಪ್ರಕಟಿಸಿಯೇ ಬಿಟ್ಟಿತು. ಆಗ ಆದ ಸಂತೋಷಕ್ಕೆ ವರ್ಣನೆಯೇ ಇಲ್ಲ. ದುಬಾಯಲ್ಲಿ ದುಡಿಯುವ ಬಡ ಕಾರ್ಮಿಕನಿಗೆ ಊರಿಗೆ ಹೋಗಲು ಎರಡು ವರ್ಷದ ಬಳಿಕ, ವಿಮಾನದ ಟಿಕೆಟ್ ಸಿಕ್ಕಷ್ಟು ಸಂತೋಷ ಆಯಿತು. ಇನ್ನೂ ಹೊರಡಲು ವಾರವಿದೆ, ನಾಲ್ಕು ದಿನವಿದೆ, ಬರೇ ಎರಡು ದಿನ ಉಳಿದಿದೆ ಎನ್ನುವಂತಹ ಕಾತುರ-ಆತುರ-ಕನವರಿಕೆ-ಉತ್ಸಾಹ.  ಪುಕ್ಕಟ್ಟೆ ಕೂಲಿ ಕೆಲಸಕ್ಕಿಂತ ಕಛೇರಿಯ ಕೆಲಸವೇ ವಾಸಿ ಅನಿಸಿತು. ಇದಕ್ಕೆ ನಿಗದಿತವಾದ ಸಮಯವಿದೆ, ವಿರಾಮವಿದೆ, ವಿನಾಯಿತಿಯೂ ಇದೆ. ಆದರೆ ಇಲ್ಲಿ ಬರೇ ದುಡಿತ. ಜೊತೆಗೆ ಬೆನ್ನು ತಟ್ಟುವ ಶಹಬ್ಬಾಸ್ಗಿರಿಯೂ ಇಲ್ಲ. ಬದಲಾಗಿ ಟೀಕೆಟಿಪ್ಪಣಿಗಳೇ ಹೆಚ್ಚು. ನಿಮ್ಮ ತಂದೆತಾಯಿ ನಿಮ್ಮನ್ನು ಮುದ್ದಿನಿಂದ ಸಾಕಿದ್ದು ಮಾತ್ರ. ಒಂದು ಕೆಲಸವೂ ಅಚ್ಚುಕಟ್ಟಾಗಿ ಮಾಡಲು ಕಲಿಸಿಲ್ಲ. ಎಲ್ಲದ್ದಕ್ಕೂ ನಾನೇ ಹಿಂದೆ ಬರಬೇಕು ಬೈಗಳು ನನಗೆ ಮಾತ್ರವಲ್ಲ, ಹೆತ್ತವರಿಗೂ ಸೇರಿಸಿಯೂ ಸಿಗುತ್ತಿತ್ತು.

ನನಗೆ ಲಾಕ್‌ಡೌನ್ ಬಳಿಕ, ಕಛೇರಿಯಿಂದ ಮನೆಗೆ ಬಂದಾಗ, ಯಾವುದೋ ಖಾಸಗಿ ಆಸ್ಪತ್ರೆಯ ಕೋಣೆ ಹೊಕ್ಕಿದ ಅನುಭವವಾಗುತ್ತಿತ್ತು. ಎಲ್ಲೆಡೆ ಡೆಟಾಲಿನ ಕಟುವಾದ ಪರಿಮಳ. ಮನೆಯೊಳಗೆ ಕಾಲಿಟ್ಟ ಕೂಡಲೇ  ಮಾತಿಲ್ಲ – ಸಂಭಾಷಣೆ ಇಲ್ಲ. ಒಂದೇ ಧ್ವನಿ – ‘ನೇರವಾಗಿ ಬಾತ್‌ರೂಮಿಗೆ ಹೋಗಿರಿ. ಯಾವುದನ್ನೂ ಮುಟ್ಟಬೇಡಿ – ಹಿಡಿಯಬೇಡಿ. ಬೇಗನೇ ಬಿಸಿ ಬಿಸಿಯಾಗಿ ಸ್ನಾನ ಮುಗಿಸಿ ಬನ್ನಿರಿ. ಬಟ್ಟೆಗಳೆಲ್ಲವನ್ನೂ ಒಗೆಯಲು ಹಾಕಿ’.

ಸ್ನಾನದ ಮನೆಯಲ್ಲಿ ಗರಂ ಗರಂ ಬೆಚ್ಚಗೆ ನೀರು, ಬಟ್ಟೆ ಕಳಚಿ ಹಾಕಲು ಪ್ರತ್ಯೇಕ ಬಕೇಟು. ಜೊತೆಗೆ ನೇತು ಹಾಕಿರುವ ಗರಿಗರಿ ಇಸ್ತ್ರಿ ಹಾಕಿದ ಉಡುಪುಗಳು. ಅದನ್ನು ಧರಿಸಿಕೊಂಡೇ ಹೊರಬೇಕು. ಹೀಗೆ ಹೊರಗೆ ಕಾಲಿಟ್ಟಾಗ ಅದೆಲ್ಲೂ ಚಳಿಗಾಲದಲ್ಲಿ ಆಗುಂಬೆ ಘಾಟಿಯಲ್ಲೋ, ಕುದುರೆಮುಖದ ಪರ್ವತದ ತುದಿಯಲ್ಲೋ ಇದ್ದಂತಹ ಅನುಭವ. ಸುತ್ತಲೂ ಹರಡಿರುವ ಸಾಂಬ್ರಾಣಿ ದೂಪದ ದಟ್ಟ ಹೊಗೆಗೆ ಏನೂ ಕಾಣಿಸುತ್ತಿರಲಿಲ್ಲ. ಬರೇ ಅಂದಾಜಿನಲ್ಲಿಯೇ ಹೆಜ್ಜೆ ಹಾಕುತ್ತಾ ಸೋಫಾ ಹಿಡಿಯಬೇಕಿತ್ತು. ಕೊರೋನಾವನ್ನು ಓಡಿಸಲು ಹಾಕಿದ ಈ ದೂಪವು ತಿಳಿಯಾಗುವಷ್ಟರಲ್ಲಿ ಕೆಲವು ನಿಮಿಷಗಳೇ ಕಳೆದಿರುತ್ತಿತ್ತು.

ಈಗ ಟೀಪಾಯಿ ಮೇಲೆ ಬಾಯಿ ಮುಕ್ಕಳಿಸಲು ಉಪ್ಪು ನೀರು ಇರುತ್ತಿತ್ತು. ಈ ನೀರನ್ನು ‘ಗಳಗಳ’ ಮಾಡಿಕೊಂಡು ಉಗಿಯಬೇಕು. ಅದು ಮುಗಿದ ತಕ್ಷಣ ಅರಸಿನ ಮಿಶ್ರಿತ ಬಿಸಿಬಿಸಿ ಹಾಲು ಬರುತ್ತಿತ್ತು. ಅದರಲ್ಲಿ ಏಲಕ್ಕಿ ಹಾಗೂ ಪುದೀನ ಸೊಪ್ಪಿನ ಮಿಶ್ರಣವೂ ಇರುತ್ತಿತ್ತು. ಈ ಕಾಳಜಿ, ಆರೈಕೆ ಉಪಚಾರಗಳು ಬೇಡ ಅಂದರೆ ಆಕೆಗಂತೂ ವಿಪರೀತ ಸಿಟ್ಟು – ‘ಕೊರೋನಾ ಅಂದರೆ ಅದು ನಿಮ್ಮ ಸಿನಿಮಾ ತಾರೆಗಳಾದ ಕತ್ರೀನಾ-ಕರೀನಾಗಳಲ್ಲ. ಅದು ಖತರ್‌ನಾಕ್ ವಿಲನ್‌ಗಳು. ಮುಲಾಜಿಲ್ಲದೆ ಆಕ್ರಮಣ ಮಾಡಿಯೇ ಬಿಡುತ್ತವೆ. ತಮಾಷೆಯಲ್ಲ!’ ಎಂದು ದಬಾಯಿಸುತ್ತಿದ್ದಳು.

ನಾನು ಮುಂದಕ್ಕೆ ಮಾತನಾಡುತ್ತಿರಲಿಲ್ಲ.  ‘ನಿನ್ನ ಜ್ಞಾನಕ್ಕೆ ಶರಣು’ ಎಂದು ಮೌನವಾಗಿದ್ದು ಬಿಡುತ್ತಿದ್ದೆ. ಈ ನಡುವೆ ಬಾಯಿ ಆಕಳಿಸಿದರೆ, ಕೆಮ್ಮಿದರೆ, ಸೀನಿದರೆ ಬಾಯಿ-ಮೂಗಿನಿಂದ ಸಾಂಬ್ರಾಣಿ ಹೊಗೆಯೇ ಹೊರ ಹೊಮ್ಮುತ್ತಿತ್ತು. ಅಂತೂ ಈ ಹೊಗೆ ದೇಹದ ಒಳಾಂಗಣದ ಎಲ್ಲಾ ಭಾಗಗಳಿಗೂ ಪಸರಿಸಿದ್ದು ಖಾತ್ರಿ ಅನಿಸುತ್ತಿತ್ತು.

ಇನ್ನೂ ಊಟಕ್ಕೆ ಕೂತರೆ ಮಾಮೂಲಿ ಊಟವೇ ಇರುತ್ತಿರಲಿಲ್ಲ. ಎಲ್ಲವೂ ಪೌಷ್ಠಿಕ-ಆರೋಗ್ಯಕರ ಊಟ. ಎಣ್ಣೆ-ಬೆಣ್ಣೆ, ತುಪ್ಪ ಇಲ್ಲವೇ ಇಲ್ಲ. ಹೊರಗಿನ ಕೆಂಟಕಿ-ಪಿಜ್ಜಾಗಳನ್ನು ಬಯಸುವಂತಿಲ್ಲ. ಐಸ್‌ಕ್ರೀಮ್‌ನ ಹೆಸರನ್ನೂ ಎತ್ತಬಾರದೆಂಬ ಖಡಕ್ ತಾಕೀತು. ಬಟ್ಟಲು-ಗ್ಲಾಸು ಹಿಡಿದರೆ ಡೆಟಲಿನದ್ದೇ ಪರಿಮಳ. ಕುಡಿಯುತ್ತಿರುವುದು ನೀರೋ, ಕಷಾಯವೋ ಎಂಬ ದ್ವಂದ್ವ ಎದುರಾಗುತ್ತಿತ್ತು.

ಮನೆಗೆ ಖರೀದಿಸಿ ತರುವ ತರಕಾರಿಗಳಿಗೆ ಹಣ್ಣು ಹಂಪಲುಗಳಿಗೆ ತಪ್ಪದೆ ಉಪ್ಪು ನೀರಿನ ಸ್ನಾನ. ಬ್ರೆಡ್ಡು, ರಸ್ಕು, ಬಿಸ್ಕೆಟ್, ಚಾಕುಲೇಟು ಪೊಟ್ಟಣಗಳಿಗೆ ಸ್ಯಾನಿಟೈಜರ್ ಸ್ಪ್ರೇ ಹಾಕಿ ತಿಕ್ಕಿಕೊಳ್ಳಲೇಬೇಕು. ಎಲ್ಲಿದ್ದರೂ  ಕೊರೋನಾದ ತಲೆಯನ್ನು ಜಜ್ಜಿ ಬಿಡಬೇಕು ಅನ್ನುವ ಹಠ ಕಂಡಾಗ ನನಗೆ ಚಿತ್ರದುರ್ಗದ ಕೋಟೆಯ ಒನಕೆ ಓಬವ್ವ ನೆನಪಾಗುತ್ತಿದ್ದಳು. ಆಕೆ ಕೂಡ ಅಂದು ದಾಳಿ ಇಟ್ಟಿದ್ದ ಸೈನಿಕರ ತಲೆಗಳನ್ನು ಜಜ್ಜಿ ಬಿಟ್ಟಿದ್ದಳು.

ಒಂದು ಸಂಜೆ ನನಗೂ, ಆಕೆಗೂ ಇದೇ ಕೊರೋನಾ ವಿಚಾರವಾಗಿ ಚರ್ಚೆಯಾಯಿತು. ವಾದ-ಪ್ರತಿವಾದದಲ್ಲಿ ಆಕೆ ಕೊನೆಗೆ ಸೋತು ಅಳಲಾರಂಭಿಸಿದಳು. ಕೆಲವು ನಿಮಿಷ ಕಳೆದರೂ ಅಳುವ ರಾಗ ನಿಲ್ಲಲಿಲ್ಲ. ನನ್ನ ಪುಣ್ಯಕ್ಕೆ ಅಂದು ಮಕ್ಕಳು ಟಿ.ವಿ. ನೋಡುತ್ತಾ ಪಕ್ಕದ ಕೋಣೆಯಲ್ಲಿದ್ದರು. ನನಗೆ ಒಂದಿಷ್ಟು ಪಾಪ ಅನಿಸಿತು. ಸಮಾಧಾನಪಡಿಸಲು ಒಂದಿಷ್ಟು ಹತ್ತಿರಕ್ಕೆ ಹೋದೆ. ಆಕೆ ಅಶ್ರುಧಾರೆಯನ್ನು ಹರಿಸುತ್ತಲೇ ಪಿಸುಗುಟ್ಟಿದಳು. ‘ನಿಮಗೆ ಎಲ್ಲವೂ ನಿರ್ಲಕ್ಷ – ತಮಾಷೆ. ಈ ಮಹಾಮಾರಿ ಕೊರೋನಾಕ್ಕೆ ನಿಮಗೇನಾದರೂ ಆದರೆ ನನ್ನ ಮತ್ತು ಮಕ್ಕಳ ಗತಿ ಏನು? ನಮ್ಮ ಮಕ್ಕಳಿಗೆ ಯಾರು ಆಶ್ರಯದಾತರು? ನೀವೇ ಆಳವಾಗಿ ಯೋಚಿಸಿ ನೋಡಿರಿ’ ಎಂದು ಅತ್ತೆ ಅತ್ತಳು.

ಆಕೆಯ ಭಾವನಾತ್ಮಕ ಮಾತಿಗೆ ನಾನೂ ಕರಗಿ ನೀರಾದೆ. ಆಕೆಯ ಹೇಳಿಕೆಯಲ್ಲೂ ಸತ್ಯತೆ ಇದೆಯೆಂದು ಅನಿಸಿತು. ನಮ್ಮೆಲ್ಲರ ರಕ್ಷಣೆಗಾಗಿಯೇ ಅಲ್ಲವೇ ಆಕೆ ಈ ಶುಚಿತ್ವಕ್ಕೆ ಇಷ್ಟೊಂದು ಮಹತ್ವ ನೀಡುತ್ತಿರುವುದು? ಇರಲಿ, ಅದೆಷ್ಟು ಕಷ್ಟವಾದರೂ ಆಕೆಯನ್ನು ಪೂರ್ಣವಾಗಿ ಬೆಂಬಲಿಸಬೇಕೆಂದು ನಿರ್ಧರಿಸಿದೆ. ಇನ್ನಷ್ಟು ಸನಿಹಕ್ಕೆ ಸರಿದುಕೊಂಡು ಧೈರ್ಯದಿಂದ ಆಕೆಯ ಹಸ್ತವನ್ನು ಹಿಡಿದೆ. ಮರುಕ್ಷಣ ಕೈ ಕೊಸರಿಕೊಂಡ ಆಕೆ, ‘ಸ್ಯಾನಿಟೈಸರ್ ಹಾಕಿ ಕೈ ತೊಳೆದುಕೊಂಡಿದ್ದಿರೋ ಇಲ್ಲವೋ?’ ‘ಸ್ಸಾರಿ’ ಎಂದೆ. ಕ್ಷಮಾಯಧರಿತ್ರಿ ಆದ ಆಕೆಯ ಮುಖದಲ್ಲಿ ಮಂದಹಾಸ ಮೂಡಿತು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter