ಕೊನೆಯೇ ಇಲ್ಲದಂತೆ ವಿಶಾಲ – ವಿಶಾಲವಾಗಿ ಪಸರಿಸಿಕೊಂಡಿದೆ ನೆಲ. ಅಷ್ಟೇ ವಿಶಾಲ ಆಕಾಶ. ಇಷ್ಟು ನೆಲಕ್ಕೆ ಇಷ್ಟು ಆಕಾಶ ಎಂದು ಕೊರೆದು ಕತ್ತರಿಸಿ ಇಟ್ಟಂತೆ ಕಾಣುತ್ತಿರೋ ದಿಗಂತದ ಗೆರೆ ಗೆರೆಯ ಹಠಾತ್ ಇಳಿತ ಮತ್ತು ಏರು ಮತ್ತು ಹರಿತ ಮತ್ತು ಖಚಿತತೆ. ಈ ವರ್ತುಲ ಗೆರೆಗೆ ಗೆರೆ ಜೋಡಿಸುವ ಮಹಾನ್ ಬೀದಿ. ಈ ಬೀದಿ ಬದಿಯಲ್ಲಿ ಕುರುಚಲು ಪೊದೆಗಳು, ವಿಶಾಲ ಮರಗಳು. ಈ ಬೀದಿ ಬದಿಯಲ್ಲಿ ತಟ್ಟನೆ ಪ್ರತ್ಯಕ್ಷವಾಗುವ ಅರೆನಗ್ನ ಮನುಷ್ಯರು. ನಗ್ನತೆಯ ಅವಮಾನ ಅರಿಯದ, ನಗ್ನತೆಯ ಸೌಂದರ್ಯ ಅರಿಯದ ನಗ್ನ ಪಶು ಪಕ್ಷಿಗಳು. ಬೀದಿ ಇಳಿಯುತ್ತದೆ, ಏರುತ್ತದೆ, ತಿರುಗುತ್ತದೆ ಮತ್ತು ಇಗೋ ಇಗೋ ಎಂದಾಗ ತಟ್ಟನೆ ಮುಗಿಯುತ್ತದೆ. ಇದರ ತುದಿ ಅರ್ಧ ವೃತ್ತಾಕಾರವಾಗಿ ಅಲ್ಲಿಂದ ಬೇರುಗಳನ್ನು ಚಿಗುರಿಸಿದಂತೆ ಕಾಲುದಾರಿಗಳನ್ನಾಧರಿಸಿದೆ. ಒಂದು ಮಹಾವೃಕ್ಷ ಬೇರು ಸಹಿತ ಕುಸಿದು ಬಿದ್ದಂತೆ; ಬಿದ್ದು ಯುಗ ಯುಗಗಳಾದಂತೆ. ಯುಗ ಯುಗಗಳ ಮೃತಜೀವನ ಜೀವಿಸುತ್ತಿದ್ದಂತೆ ಕಂಡು ಬರುವ ಈ ಬೀದಿಯ ಕೊನೆಯಲ್ಲಿ ನಿರ್ದಿಷ್ಟ ರೂಪವಿಲ್ಲದ ಮನೆಗಳು, ಅಂಗಡಿಗಳು, ಜೋಪಡಿಗಳು ಮತ್ತು ಒಂಟಿದೇವರ ಒಂಟಿ ಮನೆ. ಈ ನೆರಳ ಆಶ್ರಯಗಳಲ್ಲಿ ಕಿಲಿಕಿಲಿ ಕಿರಿಕಿರಿ ಥೆ ಥೈ ಬೊ ಬ್ಬೊ ಬ್ಬೋ ಮಾಡುವ; ಅಂಗಚೇಷ್ಟೆ ಮಾಡುವ ಜನಗಳು. ಮೆಲುಕಾಡುವ ದನಗಳು. ನನ್ನ ಅನ್ನ ಕಸಿಯಬೇಡ ಎಂದು ಗುರ್‌ಗುಡುವ ನಾಯಿಗಳು. ದೇವಸ್ಥಾನದ ಕೆರೆಯೊಳಗೆ, ನೀರೊಳಗೆ ಮೌನವಾಗಿ ಈಜುವ ಮೀನುಗಳು, ಏಡಿಗಳು, ನೀರುಹಾವುಗಳು. ಇದು ಸೂರ್ಯ ಪ್ರಸವಿಸಿದ ಭೂಮಿಯ ಒಂದು ಅಷ್ಟೇನೂ ಪ್ರಸಿದ್ಧ ಹೆಸರಿಲ್ಲದ ದೇಹಭಾಗ…
ಇದೊಂದು ಅಷ್ಟೇನೂ ಸವೆಯದ ಕಾಲುದಾರಿ; ಬನ್ನಿ ನೋಡೋಣ.
ಈ ಕಾಲುದಾರಿ ಸವೆದಿಲ್ಲ. ಇದು ವಿಶೇಷವಾಗಿ ಏರುವುದೂ ಇಲ್ಲ ಇಳಿಯುವುದೂ ಇಲ್ಲ. ಕಲ್ಲುಗಳಿವೆ ಮುರುಕು ಮುಳ್ಳುಗಳಿವೆ. ಸಾಯದೇ ಬದುಕಿರುವ ಬದುಕಿ ಸಾಯುತ್ತಿರುವ ಹುಲ್ಲುಗಳು ಅಪರೂಪವಾಗಿ ಒದೆಯಲ್ಪಟ್ಟು ಮುರಿದುಕೊಳ್ಳುತ್ತಿವೆ. ಬಾಡುತ್ತಿವೆ. ಕಂದು ಬಣ್ಣ ತಾಳುತ್ತಿವೆ; ಕಪ್ಪಾಗುತ್ತಿವೆ. ಇದರ ಕೊನೆಗೆ ಅಸ್ಪಷ್ಟ ಮುಳ್ಳು ಬೇಲಿಯಿದೆ. ಇದಕ್ಕೊಂದು ಅಗಲಕಿರಿದಾದ ದ್ವಾರವಿದೆ. ದಾರಿ ಮತ್ತೆ ಮುಂದುವರಿಯುತ್ತದೆ. ಅಂಗಳದ ಮಧ್ಯೆ ಆವರಣವಿಲ್ಲದ ಬಾವಿಯಿದೆ. ಇದರಿಂದ ಯಾರೂ ನೀರು ಸೇದಿಕೊಳ್ಳಬಹುದು. ಆದರೆ ಇದರ ನೀರು ಆ ಮನೆಯವರಿಗೆ ಮಾತ್ರ ಬೇಕಾಗಿದೆ. ಬಾಗಿಲು ತೆರೆದಿದೆ.
ನಲ್ಕನೆಂಬ ಬಡ ಯುವಕನೊಬ್ಬ ಇಲ್ಲಿದ್ದಾನೆ. ಮಲಗಿದ್ದಾನೆ. ಅವನ ಪಕ್ಕದಲ್ಲಿ ಯುವತಿಯೊಬ್ಬಳಿದ್ದಾಳೆ. ಅದರಾಚೆ ಒಂದು ಮಗುವಿದೆ. ಇವರೆಲ್ಲರ ದೇಹ ಕಪ್ಪಾಗಿದೆ. ಗೋಡೆಯ ಬಿರುಕಿನಲ್ಲಿ ಉರಿಸದೆ ಇರುವ ದೀಪವಿದೆ. ಅವನು ಅವಳು ಅದು ಎಚ್ಚರಾಗಿ ಕಣ್ಣು ಬಿಡುತ್ತಾರೆ. ಅಂಗಳದಲ್ಲಿ ಬಿಸಿಲು ರಂಗವಲ್ಲಿ ಇಡುತ್ತಿದೆ. ಮೂಲೆಯೊಂದರಲ್ಲಿ ಅನ್ನ ಬೇಯುತ್ತಿದೆ.
ಆತ ಏಳುತ್ತಾನೆ. ಮತ್ತೊಂದು ದಿನ ಕಣ್ಣು ಬಿಡುತ್ತಿರುತ್ತದೆ. ನೋಡುತ್ತದೆ. ಆತ ಹೊರಗೆ ಬರುತ್ತಾನೆ. ಪೊದೆಯ ಮರೆಗೆ ಹೋಗುತ್ತಾನೆ. ಅವನ ನಾಯಿ ಅವನ ಹಿಂದೆ ಕುಳಿತುಕೊಳ್ಳುತ್ತದೆ. ಅವಳ ಹೊಟ್ಟೆ ಉಬ್ಬಿರುತ್ತದೆ. ಅವನ ಮಗುವಿಗೆ ಹಸಿವಾಗುತ್ತದೆ. ಅದು ಆ ಹೊಟ್ಟೆಯನ್ನು ಅಮುಕುತ್ತದೆ. ಅವಳು ಹೊಡೆಯುತ್ತಾಳೆ. ಮಗು ಅಳುತ್ತದೆ ಮತ್ತು ತಾಯಿಯಿಂದ ಮುತ್ತುಗಳನ್ನು ಪಡೆಯುತ್ತದೆ. ಅವಳಿಗೂ ಕತ್ತಲಲ್ಲಿ ಮುತ್ತುಗಳು ಸಿಕ್ಕಿವೆ. ಏಟುಗಳೂ ಸಿಕ್ಕಿವೆ. ಅವಳೂ ಅತ್ತಿದ್ದಾಳೆ. ಸಮಜಾಯಿಸಲ್ಪಟ್ಟಿದ್ದಾಳೆ. ನಕ್ಕಿದ್ದಾಳೆ. ಅವಳಿಗೂ ಅವನಿಗೂ ಶಿಶುಗಳು; ಬಾಲಕರು, ಯುವಕರು ಸಿಗುತ್ತಾರೆ, ಮುದುಕರು ಸಿಗುವುದಿಲ್ಲ. ಅವನ ತಂದೆಗೆ ಹನ್ನೆರಡು ಜನ ಯುವಕರು ಸಿಕ್ಕಿದ್ದಾರೆ. ಈ ಹನ್ನೆರಡು ಜನಗಳಿಗೂ ಮುದುಕ ಸಿಗಲೇ ಇಲ್ಲ ಆ ಮುದುಕ ನೆಲದಡಿಯಲ್ಲಿ ಹುಗಿಯಲ್ಪಟ್ಟಿದ್ದಾನೆ. ಈ ನೆಲದಲ್ಲೇ ಇವನಿಂದಾಗಿ ಹನ್ನೆರಡು ಗುಡಿಸಲುಗಳು ಸೃಷ್ಟಿಯಾಗಿವೆ. ಈ ಗುಡಿಸಲುಗಳಲ್ಲಿ ಅಳುಗಳು ನಗುಗಳು ಉನ್ಮಾದಗಳು ಬದುಕುಗಳು ಸಾವುಗಳು ಲಾಲಸೆಗಳು ವೈರಾಗ್ಯಗಳು ಉರುಳು ಉರುಳುಗಳಾಗಿ ಬರುತ್ತವೆ; ಬಂದಿವೆ ಅಥವಾ ಬರಲಿವೆ.
ಅವನು ಗಂಜಿಯ ಮುಂದೆ ಬರುತ್ತಾನೆ. ಕುಡಿಯುತ್ತಾನೆ. ಅವಳಿಗೆ ಉಳಿದುದು ಸಿಗುತ್ತದೆ. ಮತ್ತೂ ಉಳಿದುದು ನಾಯಿಗೂ ಸಿಗುತ್ತದೆ, ಮತ್ತೂ ಉಳಿಯುವುದಿಲ್ಲ. ಅವನ ಮಗು ಅವಳ ಎದೆಯಿಂದ ಆಹಾರ ಸ್ವೀಕರಿಸುತ್ತದೆ. ಹುಟ್ಟದೇ ಇರುವ ಇನ್ನೊಂದು ಮಗು ಅವಳ ರಕ್ತನಾಳಗಳಿಂದ ಆಹಾರ ಹೀರುತ್ತದೆ. ಅವಳ ರಕ್ತದಲ್ಲಿ ಮತ್ತೂ ಮತ್ತೂ ಬೀಜಾಂಗಗಳು ಹುಟ್ಟುತ್ತಿರುತ್ತವೆ.
ಆತ ಹೊರಗೆ ಹೋಗುತ್ತಾನೆ ಕಾಲುದಾರಿಯ ಮೇಲುಮೈ ಮತ್ತೆ ಕೆದರಲ್ಪಡುತ್ತದೆ. ಹುಲ್ಲುಗಳು ಸಾವಿನ ಮತ್ತೊಂದು ಮಾರಕ ತುಳಿತಗಳನ್ನು ಸದ್ದುಗದ್ದಲವಿಲ್ಲದೆ ಅಳುವಿಲ್ಲದೆ ಸ್ವೀಕರಿಸುತ್ತವೆ, ವಿಷದ ಹಾಗಿರುವ ಅಮೃತ ಗುಟುಕುಗಳನ್ನು .
ಆತ ಪೇಟೆಗೆ ಬರುತ್ತಾನೆ. ಬೀಡಿ ಸೇದುತ್ತಾನೆ. ಚಾ ಕುಡಿಯುತ್ತಾನೆ. ದೇವರಿಗೆ ನಮಸ್ಕರಿಸುತ್ತಾನೆ; ಜನಗಳಿಗೆ ನಮಸ್ಕರಿಸುತ್ತಾನೆ. ಬೆಳ್ಳಿಯ ಬೆಂಡೋಲೆಗಳನ್ನು ಖರೀದಿಸುತ್ತಾನೆ. ಮರದ ತೊಟ್ಟಿಲಿಗೆ ಕ್ರಯ ಮಾಡುತ್ತಾನೆ ಮತ್ತು ಮರ ಕಡಿಯುವ; ನೆಲ ಅಗೆಯುವ; ಭಾರ ಹೊರುವ ಯಾವುದಾದರೊಂದು ಕೆಲಸ ಹುಡುಕುತ್ತಾ ಯಾರ ಯಾರ ಮನೆಗೋ ಹೋಗುವ ಕಾಲುದಾರಿಯನ್ನು ಸವೆಸುತ್ತಾನೆ… ಸವೆಸುತ್ತಾನೆ. ಸವೆಸುತ್ತಾನೆ.
ಇದೊಂದು ಚೆನ್ನಾಗಿ ಸವೆದ ರಥಬೀದಿ. ಬನ್ನಿ ಹೋಗೋಣ. ಇದು ದೇವರ ಮನೆ.
ಈ ಬೀದಿಯಲ್ಲಿ ಮಣ್ಣು ಸವೆಯುವುದಿಲ್ಲ. ಕಗ್ಗಲ್ಲಿನ ಚಪ್ಪಡಿಗಳು ಸವೆಯುತ್ತವೆ. ಇವುಗಳ ಮಧ್ಯೆ ಬಿರುಕುಗಳಲ್ಲಿ ಭಕ್ತಜನರ ಪಾದಧೂಳಿಗಳು ತುಂಬಿಕೊಂಡಿವೆ. ಈ ಧೂಳಿಗಳಲ್ಲಿ ಅಕಸ್ಮಾತ್ ಬಿದ್ದ ಬೀಜಗಳು ತೇವವಿದ್ದರೆ ಮೊಳೆಯುತ್ತವೆ. ಇದರ ಮೇಲೆ ವರ್ಷಕ್ಕೊಮ್ಮೆ ಮರದ ರಥದ ಗಾಲಿಗಳು ಉರುಳುತ್ತವೆ. ಇಲ್ಲಿ ಮಹತ್ವಾಕಾಂಕ್ಷೆಯ ಜನಗಳ ಅನೇಕ ಆಸೆಗಳು ಉರುಳಿಹೋಗಿವೆ. ಇಲ್ಲಿ ಭಯ ಭಕ್ತಿ ಸಹಜವಾಗಿ ಹುಟ್ಟಿದಂತೆ ಭಯ ಭಕ್ತಿಗಳು ನಟಿಸಲ್ಪಡುತ್ತಲೂ ಇವೆ.
ಇದರ ಕಗ್ಗಲ್ಲಿನ ಮಹಾದ್ವಾರದಡಿಯಿಂದ ಒಳ ಪ್ರವೇಶಿಸುವ ದೊಡ್ಡ ಮನುಷ್ಯನು ಸಣ್ಣವನಾಗಿಯೂ ಗರ್ಭಗುಡಿಯಲ್ಲಿರುವ ಚಿಕ್ಕದೇವರ ಪ್ರತಿಮೆ ದೊಡ್ಡದಾಗಿಯೂ ಇರುವಂತೆ ಕಾಣಿಸಿಕೊಳ್ಳಬೇಕಾಗಿದೆ. ಇಲ್ಲಿಯೂ ಕೃತಾರ್ಥತೆಯ, ಪರಿಪೂರ್ಣತೆಯ ಸಂವೇದನೆ ನಾಣ್ಯಗಳ ಸದ್ದಿನಿಂದಲೇ ಲಭ್ಯವಾಗುತ್ತವೆ. ದೇವರ ಮುಂದಿರುವ ಹುಂಡಿ ನಾಣ್ಯಗಳಿಂದ ತುಂಬಿಕೊಳ್ಳುತ್ತದೆ. ದೇವರು ಚಿನ್ನ ಧರಿಸಿದರೂ ಧರಿಸದಿದ್ದರೂ ಪೂಜಿಸಿದರೂ ಪೂಜಿಸಲ್ಪಡದಿದ್ದರೂ ಸ್ಥಿರ ಮುಗುಳ್ನಗೆಯನ್ನು ಬೀರುತ್ತಿರುತ್ತದೆ. ಇಲ್ಲಿನ ಗೋಡಗಳಲ್ಲಿ ಗೆರೆಗಳು ಬಣ್ಣಗಳು ಸುರಾಸುರರನ್ನು ಸೃಷ್ಟಿಸಿಕೊಂಡಿವೆ. ಈ ಚಿತ್ರಗಳು ಚಲನೆಯಲ್ಲಿ ಸ್ಥಗಿತವಾದಂತೆ ಮರಗಟ್ಟಿ ಬಿರುಗಣ್ಣು ಇಟ್ಟು ಭಯ ದು:ಖ ಸುಖ ಶಾಂತಿ ಅಭಯ ಪ್ರೀತಿಗಳಲ್ಲಿ ಹೆಪ್ಪುಗಟ್ಟಿವೆ. ಮರದ ಕಾಂಡಗಳ ಮೇಲೆ ಸತ್ತ ಚರ್ಮಗಳನ್ನು ಬಿಗಿದು ಕಟ್ಟಿ ಚೆಂಡೆ ಡೋಲುಗಳಾಗಿ ತೂಗು ಹಾಕಲ್ಪಟ್ಟಿವೆ.. ಲೋಹಗಳ ತಾಳವಾದ್ಯಗಳು ಗಂಟೆಗಳು ತ್ರಿಕಾಲ ಪೂಜಾ ಸಮಯಗಳಲ್ಲಿ ಶಬ್ದಿಸುತ್ತಾ ತ್ರಿಕಾಲದ ಆರಂಭ ಅಂತ್ಯಗಳ ಎಲ್ಲೆಗಳನ್ನು ಸೂಚಿಸುತ್ತವೆ. ಇಲ್ಲಿಯ ಪವಿತ್ರತೆ ಅಪವಿತ್ರತೆಗಳ ಬಗ್ಗೆ ಎಷ್ಟೂ ತಿಳಿಯದ ಬಾವಲಿಗಳು ಹಲ್ಲಿಗಳು ಜಿರಲೆಗಳು ಮತ್ತಿತರ ಕ್ರಿಮಿ ಕೀಟಗಳು ಸಂತಾನ ವೃದ್ಧಿ ಮಾಡುತ್ತಾ, ಕೊಲೆ ಮಾಡುತ್ತಾ ಆಹಾರ ಸ್ವೀಕರಿಸುತ್ತಾ; ಮಕ್ಕಳಾಟಿಕೆ ಮಾಡುತ್ತಾ ಪುಂಡಾಟ ಮಾಡುತ್ತಾ ಅಲೆದಾಡುತ್ತಿವೆ. ಇವುಗಳ ಅಮೇಧ್ಯ ಅಸಹ್ಯವಾಗಿದ್ದರೂ ಅಪವಿತ್ರವಾಗಿರುವುದಿಲ್ಲ. ಇದರೊಳಗೆ ನಾಯಿಗಳು ಬರುವುದಿಲ್ಲ. ಬಂದರೂ ಏಟು ತಿಂದು ದೂರ ಓಡುತ್ತವೆ.
ಇದರ ರಾಜಾಂಗಣದಲ್ಲಿ ಜಾತಿ ಭೇದವನ್ನು ಅನುಸರಿಸಿದ ಅದೃಶ್ಯ ರೇಖೆಗಳಿವೆ. ಇವುಗಳನ್ನು ದಾಟಿ ಹೋಗಲು ಹುಟ್ಟಿನಿಂದ ದೊರಕಿದ ಪರವಾನಗಿ ಬೇಕಾಗಿದೆ. ಈಗ ಈ ಎಲ್ಲೆಗಳು ರೇಖೆಗಳು ಮುರಿಯಲ್ಪಟ್ಟಿವೆ. ಗುಂಪುಗಳು ಗರ್ಭಗುಡಿಯೊಳಗೂ ಪ್ರವೇಶ ದೊರಕಿಸಿ; ಕಾಣೆಯಾದ ದೇವರನ್ನು ಹುಡುಕಿ; ನಿರಾಶರಾಗಿ ಹೊರಬಂದಿವೆ. ಇಲ್ಲಿಯ ಪ್ರಸಾದದ ತಟ್ಟೆಗಳಿಗೆ ಹುಂಡಿಗಳಿಗೆ ಕಾಸು ಎಸೆದು ರೂಪಾಯಿ ಬೇಡಲ್ಪಡುವ ಕ್ರಿಯೆ ಸದಾ ನಡೆದಿರುತ್ತದೆ. ಇಲ್ಲಿ ಬೈರನೂ ಶಾಸ್ತ್ರಿಗಳೂ ಶೆಟ್ಟಿಯೂ ಪೂಜಾರಿಯೂ ರಾಮನೂ ಚೋಮನೂ ರಾಘವನೂ ಶ್ರೀನಿವಾಸನೂ ನಕ್ರನೂ ದೊಂಗನೂ ಕಾಸುಗಳನ್ನು ಎಸೆದಿದ್ದಾರೆ. ಇಲ್ಲಿ ಉರಿಯುವ ಹಣತೆಗಳು ಆರತಿಗಳು ದೊಂದಿಗಳು ಇವರೆಲ್ಲರ ಎಣ್ಣೆ ಕುಡಿದು ಉರಿದಿವೆ.
ಇಲ್ಲಿ ಶ್ಮಶಾನ ವೃಂದಾವನವನ್ನೂ ವೃಂದಾವನ ಶ್ಮಶಾನವನ್ನೂ ಬೇಡಿಕೊಂಡಿದೆ. ಇಲ್ಲಿ -ಹ್ಹ -ಇಲ್ಲಿ ಯಾವುದಾದರೊಂದು ಕ್ಷಣದಲ್ಲಿ ಕ್ಷಣಿಕವಾದರೂ ಸೈ,, ಆತ್ಮ ಪರಮಾತ್ಮನನ್ನು ಭೇಟಿಯಾಗಿದೆ. ಈ ಕಾಲ್ಪನಿಕ ಭೇಟಿಯಲ್ಲಿ ಕಲ್ಲು ಅರಳಿ ಹೂವಾಗಿದೆ! ಹೂವು ಸ್ವರ್ಗವಾಗಿದೆ. ಸ್ವರ್ಗ ದೇವರ ರಾಜ್ಯವಾಗಿದೆ. ಇದರ ಗೋಡೆಗಳ ಹೊರಗೆ ನಮ್ಮ ಭೂಮಿ, ಮನೆ ದಾರಿ ಇದೆ. ಇದರಲ್ಲಿ ನಾವು ಭಾಗ್ಯಗಳನ್ನು ಹುಡುಕುತ್ತೇವೆ; ಪಡೆಯುತ್ತೇವೆ ಅಥವಾ ಹುಡುಕುತ್ತಲೇ ಮುದಿಯರಾಗಿ ಬಿಡುತ್ತೇವೆ.
ಇದು ಮಠದ ದಾರಿ. ಬನ್ನಿ, ಕೆಲವೇ ಹೆಜ್ಜೆಗಳು.
ಇದು ದೇವರ ಎರಡನೇ ಮನೆ. ಇಲ್ಲಿರುವ ಸ್ವಾಮಿ ಮನುಷ್ಯ ಸಂಬಂಧಗಳಲ್ಲಿ ಯಾವುದಕ್ಕೂ ಬದ್ಧರಲ್ಲ. ಇವರು ದೇವರಿಗೆ ಶಿಷ್ಯನಾಗಬೇಕು; ಮನುಷ್ಯರಿಗೆ ದೇವರಾಗಬೇಕು. ಇವರ ಆತ್ಮವನ್ನು ಕೊಲೆ ಮಾಡಲಾಗಿದೆ ಮತ್ತು ಮಮ್ಮಿಯಂತೆ ಇವರ ದೇಹದ ಮಾಂಸ ಗೋಪುರದೊಳಗೆ ರಕ್ಷಿಸಿಡಲಾಗಿದೆ. ಈ ಮಮ್ಮಿ ಇದರ ಕಣ್ಣು ಗುಣಿಗಳೊಳಗಿನಿಂದ ಪ್ರಪಂಚವನ್ನು ಇಣುಕಿ ನೋಡುತ್ತಾ ಸೃಷ್ಟಿಗೆ ವಿಮುಖವಾಗಿದೆ. ಈ ಮಮ್ಮಿ ಅನಾರೋಗ್ಯಕರವಾದ ಅಂತರ್‌ಮುಖವನ್ನು ಅಡಗಿಸಿಡುತ್ತಾ ಆರೋಗ್ಯಕರವಾದ ಬಹಿರ್‌ಮುಖವನ್ನು ಪ್ರದರ್ಶಿಸುತ್ತಾ ಬದುಕಿದೆ. ಈ ಬದುಕಿನ ಸಾರ್ಥಕತೆ ಪುರಾಣ ವಾಚನದಲ್ಲಿ, ಹರಿಕತೆಯಲ್ಲಿ, ಭಜನೆಯಲ್ಲಿ, ಪೂಜೆಯಲ್ಲಿ, ಜನತಾಸೇವೆಯಲ್ಲಿ, ಜನಾರ್ದನ ಸೇವೆಯಲ್ಲಿ ಡ ಡ್ಡ ಡೀಂಗ್ ಣ ಎಂದು ಪ್ರಕಟವಾಗುತ್ತಿರುತ್ತದೆ.
ಈ ಸ್ವಾಮಿ ದಿನಕ್ಕೆ ಮೂರು ಬಾರಿ ಮೀಯುತ್ತಾ ಮೂರು ಬಾರಿ ಮಠದ ದೇವತಾ ವಿಗ್ರಹವನ್ನು ಪೂಜಿಸುತ್ತಾ ಒತ್ತಾಯ ಪೂರ್ವಕವಾದ ಬ್ರಹ್ಮಚರ್ಯ ಪಾಲಿಸಿ ಕೊರಡಾಗಿದ್ದಾರೆ. ಅವರ ಆತ್ಮ ಸೂಳೆಯ ಹಾಗೆ ಮನೋಕಾಮನೆಯಲ್ಲಿ ಗುಟ್ಟು ಕೇಳಿಗಳಲ್ಲಿ ಭೋಗಿಸಿ ಕ್ಷತವಿಕ್ಷತವಾಗಿದೆ. ಇವರು ಬದುಕಿದ ದಿನಗಳಿಗಿಂತ ದುಪ್ಪಟ್ಟು ಮುಪ್ಪಟ್ಟು ದಿನಗಳು ಕಾಲಗತಿಯಲ್ಲಿ ಕ್ಷಯಿಸಿ ಹೋಗಿವೆ. ಈ ಮಠದ ಶ್ಮಶಾನದಲ್ಲಿ ಪದ್ಮಾಸನ ಹಾಕಿದ ಪೂರ್ವ ಸ್ವಾಮಿಗಳ ಶವಗಳು ಹೂಳಲ್ಪಟ್ಟಿವೆ. ಹೀಗೆ ಹೂಳಲ್ಪಟ್ಟ ಶವಗಳ ಅಸ್ಥಿಪಂಜರಗಳು ನೆಲದ ಬಿಸಿಗೆ ಕಣ ಕಣಗಳಾಗಿ ಕರಗಿ ಹೋಗುತ್ತವೆ. ಇಲ್ಲಿ ದೇವತಾತ್ಮಗಳು ಪ್ರೇತಗಳಾಗಿ ತಿರುಗುತ್ತಿವೆ ಎಂದು ಭಾವಿಸಲ್ಪಡುತ್ತದೆ.
ಈ ಮಠದಲ್ಲಿ ಬಸವ ದಷ್ಟಪುಷ್ಟವಾಗಿ ಬೆಳೆದು ನಿಂತು ಬಯಲಲ್ಲಿ ಮೇಯಲು ಬಂದ ದನಗಳನ್ನು ಛೇಡಿಸುತ್ತಾ – ಬಲಾತ್ಕಾರದಂತೆ ಕಂಡುಬರುವ ಪ್ರೇಮಾಘಾತಗಳಿಂದ ಸುಖದ ಸಂಗಾತಿಗಳನ್ನಾಗಿ ಸ್ವೀಕರಿಸುತ್ತಿರುತ್ತದೆ. ಇದರ ಪಾಪಕೃತ್ಯದ ಹಾಗೆ ಕಂಡುಬರುವ ಸೃಷ್ಟಿ ಕಾರ್ಯ ಪವಿತ್ರ ಪ್ರಸವಗಳಲ್ಲಿ ಫಲಿತವಾಗುತ್ತವೆ.
ಈ ಮಠದ ಗೋಡೆಗಳಿಗೆ ಸೃಷ್ಟಿ ಸ್ತಂಭನವಾಗಿದೆ. ಇಲ್ಲಿಯ ಬಂಧನ ಎಲ್ಲೆಗಳಿಲ್ಲದ ಸ್ವಾತಂತ್ರ್ಯದಷ್ಟು ಅಲ್ಲೋಲ ಕಲ್ಲೋಲಗಳನ್ನುಂಟು ಮಾಡುತ್ತಿದೆ.
ಇದಕ್ಕೆ ತಾಗಿಕೊಂಡು ಒಂದು ಅನ್ನಛತ್ರವಿದೆ. ಇದರಲ್ಲಿ ಅಪರಿಚಿತ; ಅಪ್ರಾರ್ಥಿತ ಅತಿಥಿಗಳು ಸ್ವಾಗತಿಸಲ್ಪಡದೆ; ವಿದಾಯ ಹೇಳಲ್ಪಡದೆ ಬಂದು ಹೋಗುತ್ತಿರುತ್ತಾರೆ. ಇವರ ಕಾವಿ – ಚಿಂದಿ ವಸ್ತ್ರಗಳು ಉಳಿದವರಿಗಿಂತ ಭಿನ್ನ ವೇಷಗಳನ್ನು ತೊಡಿಸುತ್ತವೆ. ಮರಣ ಹೋಮದ ಹೋಮ ಕುಂಡಗಳಲ್ಲಿ ಎಸೆಯಲ್ಪಡಬಹುದಾದ ಈ ಮಾಂಸ ಮೂರುತಿಗಳು ಅಳುವಿಗೆ ಬದಲಿ ನಗುಗಳನ್ನು ನಗುತ್ತಾರೆ. ಇವರ ನಿದ್ದೆಗಳ ಕನಸುಗಳಲ್ಲಿ ಬಿಸಿ ಬಿಸಿ ಅನ್ನದ ಕೊಪ್ಪರಿಗೆಗಳನ್ನು ಇಳಿಸಲಾಗುತ್ತದೆ. ಇಲ್ಲಿ ಸಾವು ಬದುಕಿನ ನಾಟಕವನ್ನಾಡುತ್ತಿದೆ. ಇವರ ಆತ್ಮ ರತಿಯಂದ ದಸ್ಯು ರೂಪದ ದೇವತಾ ಸಮಾನರಾದ ದಾನಿಗಳು ಹುಟ್ಟುತ್ತಾರೆ, ತಕ್ಷಣ ಸಾಯುತ್ತಾರೆ. ಸ್ವಾರ್ಥದ ವಾಮನ ಹಜ್ಜೆಗಳು ದಾನಿ ಬಲಿ ಚಕ್ರವರ್ತಿಯನ್ನು ದಿನ ರಾತ್ರಿ ತುಳಿಯುತ್ತಿವೆ…. ತುಳಿಯುತ್ತಿವೆ……
ಇದು ಕಸಾಯಿಖಾನೆಯ ದಾರಿ…… ಹೋಗೋಣ.
ಈ ಕಾಲುದಾರಿ ನನ್ನ – ನಿಮ್ಮ ಅವಶ್ಯಕತೆಗಿಂತ ಹೆಚ್ಚು ಅಗಲವಾಗಿದೆ. ಇದರಿಂದಾಗಿ ಒತ್ತಾಯಪೂರ್ವಕ ಎಳೆದೊಯ್ಯಲಾದ ನಾಲ್ಕು ಕಾಲಿನ ಪ್ರಾಣಿಗಳ ಭಾರವಾದ ಹೆಜ್ಜೆಗಳು ಎಳೆಯಲ್ಪಟ್ಟಿವೆ. ಈ ಕಸಾಯಿಖಾನೆಯಲ್ಲಿ ಜೀವಗಳು ತಾತ್ಕಾಲಿಕವಾಗಿ ತಂಗುವ ತಂಗುದಾಣವಿದೆ. ಇಲ್ಲಿ ಸಾಯಿಸಲ್ಪಡುವ ಮೊದಲು ಆಹಾರಗಳನ್ನು ಗಬಗಬನೆ ಮುಕ್ಕಲಾಗುತ್ತದೆ. ಇಲ್ಲಿ ಅನಿರೀಕ್ಷಿತವಾಗಿ – ಆಗೊಮ್ಮೆ ಈಗೊಮ್ಮೆ – ತಡೆಯಲಸಾಧ್ಯವಾದ ಸಾವಿನ ವಿರುದ್ಧ ಘೋಷಣೆಯಂತೆ; ಮೃತ್ಯುಂಜಯ ಜಪದ ಮಂತ್ರಗಳಂತೆ; ಆರ್ತನಾದ ಕೇಳಿಬರುತ್ತದೆ. ತಲೆ ಕೆಳಗಾದ ರಕ್ತ ಸುರಿಯುವ ಮೃತ ದೇಹಗಳು ಇಲ್ಲಿ ನೇತು ಹಾಕಲ್ಪಡುತ್ತವೆ. ಜೀವಿತದ ಕೊನೆಯ ಕ್ರಿಯಯ ಯಾತನೆಯಲ್ಲಿ ಬಂದ ಕಣ್ಣೀರು ರಕ್ತದೊಂದಿಗೆ ಬೆರೆತು, ಹಿಂಸೆಯೊಂದಿಗೆ ಬೆರೆತ ದಯೆಯಂತೆ ನಿಷ್ಪಲವಾಗಿ ಸಿಮೆಂಟಿನ ಕಿರು ಚರಂಡಿಗಳಿಗೆ ಹನಿ ಹನಿಯಾಗಿ ಬಿದ್ದು ಹರಿದು ಮಣ್ಣಿಗೆ ಇಂಗಿ ಹೋಗುತ್ತದೆ ಮತ್ತು ಮಣ್ಣಿನಲ್ಲಿ ಆಹಾರ ಹುಡುಕುತ್ತಾ ಚಲಿಸುವ ಮರಗಿಡಗಳ ಬೇರುಗಳಿಗೆ ಆಹಾರವಾಗುತ್ತದೆ.
ಮರಣ ಜೀವನ; ಮರಣ ಜೀವನ; ಮರಣ ಜೀವನ ಇಲ್ಲಿ ಕೈ ಕೈ ಹಿಡಿದು ಕಾಲ ಪ್ರವಾಹದಲ್ಲಿ ಸೇರಿ ಹೋಗುತ್ತದೆ; ಸೋರಿ ಹೋಗುತ್ತಿರುತ್ತದೆ……
ಇದು ಸೂಳೆಯ ಮನೆಗ ಹೋಗುವ ದಾರಿ.
ಇಲ್ಲಿ ಅರಳುವ ರಾತ್ರಿ ಹೂಗಳು ತಾತ್ಕಾಲಿಕ ಪ್ರೇಮ ಸಮಾಧಿಯನ್ನು ಅಲಂಕರಿಸುವ ನೈರ್ಮಲ್ಯ ಪುಷ್ಪಗಳಾಗಿರುತ್ತವೆ. ಇಲ್ಲಿ ಕಟ್ಟಲ್ಪಡುವ; ಕೆಡವಲ್ಪಡುವ ಕಾಮ ತಾಜಮಹಲ್‌ಗಳ ಕಲಶಗಳು – ಪ್ರಕಾಶದಲ್ಲಿ ಲಯವಾಗುತ್ತಿವೆ. ಭೇಟಿಗೊಮ್ಮೆ ಸೃಷ್ಟಿಯ ಕುರುಕ್ಷೇತ್ರದಲ್ಲಿ ನೆಡಲ್ಪಡುವ ಪ್ರೇಮ ವಿಜಯಸ್ತಂಭಗಳು, ಕೂಟ ಸಮಾಧಿಯ ಜವುಗಿನಲ್ಲಿ ಕುಸಿಯುತ್ತವೆ. ಇಲ್ಲಿ ರೋಧಿಸಲ್ಪಡದ ಸಾವು ಪುಲಕಗಳಿಗೊಮ್ಮೆ ಹುಟ್ಟುತ್ತದೆ. ಇಲ್ಲಿ ಮಾತ್ರ ಭಾವನೆಗಳಿಗೆ ನವಿರುಗಳಿಗೆ ಉನ್ಮಾದಗಳಿಗೆ ಮತ್ತಿತರ ಅಗೋಚರ ಸಂವೇದನೆಗಳಿಗೆ ಕ್ರಯವಿದೆ. ಇಲ್ಲಿ ಪಡೆಯಲ್ಪಟ್ಟುದು ಕ್ಷಣ ಮಾತ್ರದಲ್ಲಿ ಕಳೆದುಹೋಗುತ್ತದೆ. ಶವಗಳಿಗೆ ಜೀವ ತುಂಬುವ ನಿರರ್ಥಕ ಯತ್ನಗಳು ಇಲ್ಲಿ ಸದಾಕಾಲ ನಡೆಯುತ್ತಿರುತ್ತವೆ. ಇಲ್ಲಿ ಪ್ರವರ್ತಿಸಲ್ಪಡುವ ಮಾನುಷ ಕ್ರಿಯಾ – ಹೊರ ನೋಟಕ್ಕೆ ಪರಿಪೂರ್ಣ ಸೃಷ್ಟಿಕ್ರಿಯೆಯ ಹಾಗೆ ಕಂಡುಬರುತ್ತಾ ನೆರಳಾಟದಲ್ಲಿ ನೆರಳಿನ ಆಟದಲ್ಲಿ, ಕರಗಿಹೋಗುತ್ತದೆ. ಆಡಮನಿಗೆ ನಿರಾಕರಿಸಲ್ಪಟ್ಟ ಹಣ್ಣು ಇಲ್ಲಿ ಮಾರಾಟಕ್ಕಿದೆ. ಆದರೆ ಈ ಹಣ್ಣು ಫಲಿಸುವುದಿಲ್ಲ!
ಈ ದಾರಿಯಲ್ಲಿ ಹೋದರೆ ಶಂಕರೀ ನದಿಗೆ ಹೋಗುತ್ತೇವೆ…. .
ಈ ನದಿ ಮಳೆಗಾಲದಿಂದ ಮಳೆಗಾಲಕ್ಕೆ ಬೆಳೆಯುತ್ತಾ, ಕ್ರೂರಿಯೊಬ್ಬನ ಭಾವಪಲ್ಲಟಗಳಂತೆ ಕ್ರೋಧಗೊಳ್ಳುತ್ತಾ ಶಾಂತವಾಗುತ್ತಾ ಇರುತ್ತದೆ. ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಮ್ ಎಂಬ ಮಂತ್ರದ ಕ್ರಿಯೆಯಾಗಿರುವ ಇದರಲ್ಲಿ ರಾಮ ರಹೀಮ ಜೋಸೆಫರ ಮಕ್ಕಳು ಈಜು ಕಲಿತಿದ್ದಾರೆ. ಭಾಗೀರಥಿಯ ಲಕ್ಷಾವತಾರವಾದ ಇದರಲ್ಲಿ ಚಿತಾಭಸ್ಮಗಳಿಗೆ ಸದ್ಗತಿಯಾಗಿದೆ. ಇದು ಕೊಲ್ಲಬಲ್ಲುದು, ಹುಟ್ಟಿಸಬಲ್ಲುದು. ಇಲ್ಲಿ ಮರಿಕಪ್ಪೆಯನ್ನು ದೊಡ್ಡ ಕಪ್ಪೆ; ದೊಡ್ಡ ಕಪ್ಪೆಯನ್ನು ನೀರುಹಾವು; ನೀರುಹಾವನ್ನು ಹೆಬ್ಬಾವು ನುಂಗಲು ಹೊಂಚು ಹಾಕುತ್ತಾ ದಡಗಳಲ್ಲಿ ಕಾದಿರುತ್ತವೆ.
ಇಲ್ಲಿಂದ ಹೋದರೆ ಸುಖನಿವಾಸಕ್ಕೆ ತಲುಪುತ್ತೇವೆ, ಬನ್ನಿ.
ಈ ಮನೆಯಲ್ಲಿ ವರ್ತಮಾನದ ಸುಂದರ ಘಟನೆಗಳಿಂದ ಭವಿಷ್ಯವನ್ನು ಊಹಿಸಲಾಗುತ್ತದೆ. ಈ ಮನೆಯ ತುಂಬಾ ಜನರಿದ್ದಾರೆ. ಮರಣ ನಂತರದ ಸ್ವರ್ಗದ ಆಸೆಯಿಂದ ಇಲ್ಲಿ ಮನುಷ್ಯರು ದೇವತಾ ಸಮಾನವಾದ ಸಹನೆ, ಪ್ರೀತಿ ದಯೆ ಕರುಣೆಗಳಿಂದ ತುಂಬಿಕೊಂಡವರಾಗಿದ್ದಾರೆ. ಇಲ್ಲಿನ ನಡುಮನೆಯಲ್ಲಿ ಅಲಂಕರಿಸಿದ, ಆರಾಧಿತ ದೇವ ಪ್ರತಿಮೆ ಇದೆ. ಇಲ್ಲಿ ನಗುತ್ತಿರುವ ಮುಖಗಳು: ಕಣ್ಣುಗಳು ಇನ್ನೊಂದು, ಮತ್ತೊಂದು, ಮಗುದೊಂದು ಮನುಷ್ಯಜನ್ಮವನ್ನು ಬೇಡಿಕೊಳ್ಳುವಂತೆ ಆಶಿಸುವ – ಆಸೆಗಳನ್ನು ಹುಟ್ಟಿಸುತ್ತವೆ. ಈ ಮನೆ ಈ ದೇಶದ ಕಾಲ್ಪನಿಕ ಸುಖಸಾಮ್ರಾಜ್ಯದ ಪ್ರತಿಮಾರೂಪವಾಗಿದೆ. ಅಂತ್ಯ ಎಂದಿಗೂ ಬರುವುದೇ ಇಲ್ಲವೇನೋ ಎಂಬಂತೆ ಕರ್ಮವನ್ನೂ, ಇದೋ ಅಂತ್ಯ ನಾಳೆಯೇ ಬರುತ್ತದೆ ಎಂಬಂತೆ ಧರ್ಮವನ್ನೂ ಮಾಡಲಾಗುತ್ತದೆ. ಈ ಮನೆಯ ದಾರಿ ಅತಿಥಿಗಳ ನಿರಂತರ ಯಾತ್ರೆ, ವಿದಾಯಗಳಿಂದ ಸವೆದುಹೋಗಿದೆ. ಈ ದಾರಿಯಲ್ಲಿ ನಾನೂ ನೀವೂ ನಡೆಯಲು ಯುಗ ಯುಗಗಳಿಂದ ತಪಸ್ಸು ಮಾಡಿ ವರ ಪಡೆದಿರಬೇಕು. ಇಲ್ಲಿ ಉನ್ಮಾದವಿಲ್ಲದ – ನಿಯಂತ್ರಿತ – ಸುಖ ಹೆಪ್ಪುಗಟ್ಟಿ ನಿಂತಿದೆ. ಇಲ್ಲಿ ಬದುಕೋಣ ಅನ್ನಿಸುತ್ತದೆ. ಇಲ್ಲಿನ ಸಾವು ಪುನರ್ಜನ್ಮದ ಭರವಸೆಯಿಂದ ಪ್ರಸ್ಥಾನವೆಂದೇ ಭಾವಿಸಲಾಗುತ್ತದೆ,
ನಡೆಯಿರಿ…… ಇನ್ನೊಂದು ಮನೆಗೆ ಹೋಗೋಣ. ಇದರ ಹೆಸರು ದುರ್ಗಾನಿಲಯ.
ಈ ಮನೆಯಲ್ಲಿ ಸುಖವನ್ನು ಅಡ್ಡದಾರಿಯಿಂದ ತಲುಪಲು ಅನೇಕ ವಿಫಲ ಹೋರಾಟಗಳು ನಡೆದಿವೆ. ಬುದ್ಧಿಶಕ್ತಿಯ ದೈಹಿಕ ಬಲದೊಡನೆ ಯಜಮಾನನು ಆಶ್ರಿತರೊಡನೆ; ಸ್ವಾರ್ಥ ಸ್ತಾರ್ಥದೊಡನೆ ಇಲ್ಲಿ ಸದಾಕಾಲ ಹೋರಾಡುತ್ತಿರುತ್ತದೆ. ಇಲ್ಲಿ ಬೆಳಕಿಗಡ್ಡವಾಗಿ ಬಾಗಿಲುಗಳು ಮುಚ್ಚಲ್ಪಟ್ಟಿವೆ. ಇಲ್ಲಿ ಸುಖವನ್ನು ಸುಖಿಗಳಿಂದ ಕಸಿಯಲಾಗಿದೆ. ಇಲ್ಲಿ ಭಾಷೆಗಳಿಗೆ ಭಾಷೆಗಳು ಸವಾಲು ಹಾಕಿ; ನಂಬಿಕೆಗಳಿಗೆ ನಂಬಿಕೆಗಳು ಸವಾಲು ಹಾಕಿ; ದೇವರಿಗೆ ದೇವರು ಸವಾಲು ಹಾಕಿ ಸೋತು ಗೆದ್ದಿವೆ; ಗೆದ್ದು ಸೋತಿವೆ. ಇಲ್ಲಿನ ಜನರ ಮುಖಗಳು ಹಳೆಯ ಗೊಸ ಗಾಯದ ಗುರುತುಗಳ ಹಾಗೆ ಕಂಡು ಬರುವ ವಯಸ್ಸಿನ ಗೆರೆಗಳಿಂದ ಅಲಂಕರಿಸಲ್ಪಟ್ಟಿವೆ. ನಿರೀಕ್ಷೆಗಳು ನಿರಾಶೆಯ ಮುಖವಾಡ ಧರಿಸಿ; ಪ್ರೀತಿ ದ್ವೇಷದ ಮುಖವಾಡ ಧರಿಸಿ, ಈ ಮನೆಯ ಕೋಣೆ ಕೋಣೆಗಳಲ್ಲಿ ಸುಳಿದಾಡುತ್ತಾ ದಸ್ಯುದಾಹದಲ್ಲಿ ಗಲಿಬಿಲಿಯುಂಟು ಮಾಡುತ್ತಿವೆ.
ಇದು ಕಪ್ಪೆಹೊಂಡ…… ನಿಧಾನ. ದಂಡೆಯಲ್ಲಿ ಕಪ್ಪೆಗಳಿವೆ. ತುಳಿದೀರಿ…..!
ಕಪ್ಪೆಗಳಿಗೇ ಪ್ರತ್ಯೇಕ ಹೊಂಡವಿರೋದು ಅಂದರೆ ನೀವೆಲ್ಲೂ ಕೇಳಿರಲಾರಿರಿ ಅಲ್ಲ…. ? ಈ ಹೊಂಡ ಇರೋದು ದುರ್ಗಾಪುರ ಗ್ರಾಮಕ್ಕೆ ಸೇರಿದ ಸರ್ವೆ ನಂ. 314-4ಬಿ ಯಲ್ಲಿ. ಸುಖನಿವಾಸದ ಆಸ್ತಿ ಎಂದು ಅದರ ಯಜಮಾನರೂ, ದೇವಸ್ಥಾನದ ಭಂಡಾರದ ಆಸ್ತಿ ಎಂದು ದೇವಸ್ಥಾನದ ಮೊಕ್ತೇಸರರೂ ನ್ಯಾಯಾಲಯದಲ್ಲಿ ದಾವೆ ಹೂಡಿದುದರಿಂದ 45 ಸೆಂಟ್ಸ್ ವಿಸ್ತೀರ್ಣವುಳ್ಳ ಈ ಸ್ಥಳ ಹಲವಾರು ವರುಷಗಳಿಂದ ಪಡಿಲು ಬಿದ್ದಿದೆ. ಸದಾ ನೀರು ನಿಲ್ಲುವ ಈ ಪ್ರದೇಶದಲ್ಲಿ ತಾವರೆಗಳು ಅರಳುತ್ತವೆ ಮತ್ತು ಧಾರಾಳವಾಗಿ ಕಪ್ಪೆಗಳು ಹುಟ್ಟುತ್ತವೆ. ನೀರುಹಾವುಗಳು ಏಡಿಗಳು – ಮೀನುಗಳು – ಆಮೆಗಳು- ಅಮೀಬಗಳು – ಹಾವಸೆಗಳು ಜಲಸಸ್ಯಗಳು ತಮ್ಮದೇ ಆದ ಪ್ರಪಂಚವೊಂದನ್ನು ಇಲ್ಲಿ ಸೃಷ್ಟಿಸಿಕೊಂಡಿವೆ. ಇಲ್ಲಿ ನಡೆಯೋ ಹಿಂಸೆಗಳು – ಮರಗಳು ನೆಲದಿಂದ ಆಹಾರ ಸ್ವೀಕರಿಸಿದಷ್ಟು ಶಾಂತವಾಗಿ ನಡೆಯುತ್ತಾ – ಮಾಂಸ ಭಕ್ಷಕ ಜೀವಿಗಳ ಜೀವಿತ ನಡೆಯುತ್ತಿರುತ್ತದೆ. ಮನುಷ್ಯರನ್ನು ಕೂಪಮಂಡೂಕಗಳೆಂದು ಹಾಸ್ಯ ಮಾಡೋದನ್ನ ನೀವು ಕೇಳಿರಬೇಕು. ಎತ್ತು ಎಷ್ಟು ದೊಡ್ಡ ಹೊಟ್ಟೆ ಹೊಂದಿದೆ ಎಂದು ಉಸಿರು ಒಳಗೆಳೆದುಕೊಂಡು ಮರಿಕಪ್ಪೆಗೆ ತಾಯಿಕಪ್ಪೆ ಹೊಟ್ಟೆ ಉಬ್ಬರಿಸಿ ತೋರಿಸಿ ಸತ್ತ ಕತೆ ನಿಮಗೆ ಗೊತ್ತಲ್ಲ….? ಹಾಂ…. ಕಪ್ಪೆಗಳ ಪ್ರಪಂಚವೂ ವಿಸ್ತರಿಸುತ್ತದೆ. ಮಳೆಯ ಸೂಚನೆ ಕೊಡೋ ಕಪ್ಪೆಗಳು – ಸಂಗೀತ ಮೇಳ ಮಾಡುವ ಕಪ್ಪೆಗಳು ಈ ಹೊಂಡದಲ್ಲಿವೆ….!
ಎರಡು ತಿಂಗಳ ಕೆಳಗೆ ಈ ಕಪ್ಪೆಗಳ ಹೊಂಡದಲ್ಲಿ ನವಜಾತ ಶಿಶುವಿನ ಶವವೊಂದು ಹೊಟ್ಟೆ ಉಬ್ಬರಿಸಿಕೊಂಡು ತೇಲುತ್ತಿರುವುದನ್ನು ಹಲವರು ನೋಡಿದ್ದರು. ಈ ಶವ ಎತ್ತು ಇಷ್ಟು ದೊಡ್ಡದಿದೆ ಎಂದು ತೋರಿಸಹೊರಟ ಕಪ್ಪೆಯ ಶವವನ್ನು ಥೇಟ್ ಹೋಲುತ್ತಿತ್ತು.
ದಂಡೆಯ ಮೇಲಿಂದ ಬರುವಾಗ ಜಾಗರೂಕವಾಗಿ ಬನ್ನಿ. ಹಲವು ದೊಡ್ಡ ಕಪ್ಪೆಗಳು ತುಳಿತದಲ್ಲಿ ಸತ್ತರೂ – ನಿಮ್ಮನ್ನ ಜಾರಿಸಿ ಹೊಂಡದೊಳಗೆ ಬೀಳುವಂತೆ ಮಾಡಬಲ್ಲುವು.
ಊರು ನೋಡಿದಿರಿ, ಊರಿನ ಒಂದು ಕತೆ ಹೇಳುತ್ತೇನೆ….. ಕೇಳಿ…
ದುರ್ಗಾನಿಲಯದ ರಾಮ ಪಂಡಿತರಿಗೆ ವಿಧವೆ ಮಗಳೊಬ್ಬಳಿದ್ದಳು. ಅವಳ ಹೆಸರು ದೇವಕಿ. ಮದುವೆ ಏನೆಂದು ತಿಳಿಯುವ ಮೊದಲು ವಿಧವೆಯಾಗಿದ್ದ ಈ ಹೆಣ್ಣು ಎಲ್ಲಾ ತಿಳಿದ ಮೇಲೆ ಎಂದೆಂದೂ ಶಮನವಾಗದ ಮಹಾದಾಹದಲ್ಲಿ ಊರನ್ನೇ ಕದಡಿಸಿಬಿಟ್ಟಳು. ಗಟ್ಟಿಮುಟ್ಟಾದ, ಯೌವನದಿಂದ ತುಂಬಿದ, ನಿಂಬೆ ಬಣ್ಣದ ಮೈ ಇರೋ ಇವಳು ಊರಿನ ಗಂಡಸರ ಕಣ್ಣುಗಳಿಗೆ ಬೆಳಕು ಕೊಡುತ್ತಿದ್ದಳು. ಇಲ್ಲಿನ ಅನ್ನಛತ್ರಕ್ಕೆ ಯಾವುದೋ ಊರಿನಿಂದ ಬರುತ್ತಿದ ನಾರಾಯಣ ಗೋಸಾಯಿ ಎಂಬವನೊಂದಿಗೆ ಮೊದಲಾದ ಇವಳ ಪ್ರಣಯ ಕೇಳಿ ಊರಿನ ಮಾತಾಯಿತು. ಆ ಯುವಕ ಇಂಪಾದ ಕಂಠವಿದ್ದ ಗಾಯಕನಾಗಿದ್ದ. ರಾಧೆಯ ವಿರಹ ವೇದನೆಯನ್ನು ಸಾರುವ ಹಾಡುಗಳನ್ನು ಅಪರಾತ್ರಿಯಲ್ಲಿ ಹಾಡುತ್ತಿದ್ದ ಮತ್ತು ತಪ್ಪು ತಪ್ಪಾದ ರಾಗಗಳಲ್ಲಿ ಸುಶ್ರಾವ್ಯವೆನಿಸುವಂತಹಾ ಹಾಡುಗಳನ್ನು ಕೊಳಲಿನ ತೂತುಗಳಲ್ಲಿ, ವಿರಹದ ನಿಟ್ಟುಸಿರಿನ ಗಾಳಿಯಾಗಿ ಊದುತ್ತಿದ್ದ. ಹೀಗೆ ಊದುತ್ತಾ ಊದುತ್ತಾ ಅವನ ಯೌವನವೆಲ್ಲಾ ಮುಗಿದು ಬಿಟ್ಟಿತೊ ಎಂಬಂತೆ ಕೃಶನಾಗಲಾರಂಭಿಸಿದ. ಛತ್ರವಾಸಿಗಳು ಅವನದು ಏಕಮುಖ ಪ್ರಣಯ ಅನ್ನುತ್ತಿದ್ದರು. ಆದರೆ ಬಹಳ ಜನ ದೇವಕಿ ಮತ್ತು ನಾರಾಯಣ ಗೋಸಾಯಿ ಒಟ್ಟಿಗಿದ್ದುದನ್ನು ಕಣ್ಣಾರೆ ಕಂಡುದಾಗಿ ಹೇಳುತ್ತಿದ್ದರು. ಒಂದು ದಿನ ಇದ್ದಕಿದ್ದಂತೆ ಛತ್ರದಿಂದ ನಾರಾಯಣ ಗೋಸಾಯಿ ಕಾಣಿಸದಾದ.
ಇದಾದ ಮೇಲೆ ದೇವಕಿ ಮಠದ ಸ್ವಾಮಿಗಳ ಮೇಲೆ ಕಣ್ಣು ಹಾಕಿದಳು. ಸ್ವಾಮಿಗಳು ಮಠದ ಕೆರೆಗೆ ಸ್ನಾನಕ್ಕೆ ಬರೋ ಸಮಯದಲ್ಲೇ ಅವಳೂ ಕೆರೆಗೆ ಬರುತ್ತಿದ್ದಳು. ಒದ್ದೆ ಬಟ್ಟೆಯಲ್ಲಿ ದೇಹದ ದಷ್ಟ ಪುಷ್ಟ ಭಾಗಗಳನ್ನು ಸ್ವಾಮಿಗಳಿಗೆ ತೋರಿಸುತ್ತಿದ್ದಳು. ಇದರಿಂದಾಗಿ ಸ್ವಾಮಿಗಳ ಸ್ನಾನ ಮತ್ತು ಜಪ ತಪ ಪೂಜೆಗಳು ಪ್ರಮಾಣ ಮೀರಿ ತಡವಾಗಲಾರಂಭಿಸಿದವು. ಸದಾ ಯೋಚನ ಗ್ರಸ್ತರಂತೆಯೂ ಶಾಪಗ್ರಸ್ತರಂತೆಯೂ ತೋರಿಬರುತ್ತಿದ್ದ ಅವರು ರಾತ್ರಿಯಿಡೀ ಮಠದದೊಳಗೆ ಹಸಿದ ಸಿಂಹದ ಹಾಗೆ ತಿರುಗುತ್ತಾ – ಆಳುಕಾಳುಗಳ ಮೇಲೆ ಹರಿಹಾಯಲಾರಂಭಿಸಿದರು. ಸುಖನಿವಾಸದ ಗೋಪಾಲಕೃಷ್ಣ ತಂತ್ರಿಗಳು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ದೇವಕಿ ಮಠದ ಆವರಣವನ್ನು ಪ್ರವೇಶಿಸದಂತೆ ಆಜ್ಞೆ ಮಾಡಿದರು. ಈ ಆಜ್ಞೆಯನ್ನು ಲೆಕ್ಕಿಸದೆ ಆಕೆ ಮತ್ತೂ ಮತ್ತೂ ಮಠದ ಕೆರೆಗೆ ಬರುತ್ತಿದ್ದಳು. ಅದೇ ದಿನ ಸ್ವಾಮಿಗಳು ಪುಣ್ಯ ಕ್ಷೇತ್ರಗಳ ಸಂಚಾರಕ್ಕಾಗಿ ಪರಿವಾರದೊಂದಿಗೆ ಮಠವನ್ನು ತ್ಯಜಿಸಿದರು.
ಈ ವೇಳೆಗಾಗಲೇ ಕುಪ್ರಸಿದ್ಧಳಾದ ದೇವಕಿಯನ್ನು ಅವರಿವರಿನ್ನದೆ – ಅಶ್ಲೀಲ ತಮಾಷೆ, ಕಣ್ಣು ಮಿಟುಕಿಸುವುದು, ಇತ್ಯಾದಿಗಳಿಂದ ಊರಿನ ಪೋರರು ಎದುರುಗೊಳ್ಳಲಾರಂಭಿಸಿದರು. ಬೈರ ಜಾತಿಯ ನಲ್ಕನೂ ಈ ಸುಸಂಧಿಯನ್ನು ಬಿಡಲಾಗದೆ ಅವಳೊಡನೆ ಸಲಿಗೆಯಿಂದ ವರ್ತಿಸಲಾರಂಭಿಸಿದನು. ಕಸಾಯಿಖಾನೆಯಲ್ಲಿ ರಾತ್ರಿ ಹೊತ್ತು ಇವರಿಬ್ಬರೂ ಭೇಟಿಯಾಗುತ್ತಿದ್ದ ರೆಂದು ಊರಿನಲ್ಲಿ ಗುಸು ಗುಸು ಆರಂಭವಾಯಿತು. ಇನ್ನು ಸುಮ್ಮನಿದ್ದರೆ ಊರೇ ಹಾಳಾಗುತ್ತದೆ ಎಂದುಕೊಂಡು ಗೋಪಾಲಕೃಷ್ನ ತಂತ್ರಿಗಳು ಊರಿನ ಹತ್ತು ಮಂದಿಯನ್ನು ಕಲೆಹಾಕಿ ವಿಚಾರಣೆ ನಡೆಸಿದರು. ದೇವಕಿಯನ್ನೂ ನಲ್ಕನನ್ನೂ ಸಬೆಗೆ ಕರೆಯಲಾಗಿತ್ತು. ಇದೆಲ್ಲಾ ನಿಜವೇ ದೇವಕಿ? ಎಂದು ನಡುಗುವ ಧ್ವನಿಯಲ್ಲಿ ಪ್ರಶ್ನಿಸಿದ ತಂತ್ರಿಯವರ ಪ್ರಶ್ನೆಗೆ ದೇವಕಿ ಉತ್ತರಿಸುತ್ತಾಳೆಂದು ಯಾರೂ ನಿರೀಕ್ಷಿಸಿರರಿಲ್ಲ. ಆದರೆ ಕಂಚಿನಂತಹಾ ಕಂಠದಲ್ಲಿ ಅವಳು ಹೀಗೆ ಹೇಳಿದಳು! – ತಂತ್ರಿಗಳ ಮುಖವನ್ನೇ ದುರದುರು ನೋಡುತ್ತಾ –
”ನಾನು ಶವವಲ್ಲ, ನನಗೆ ಆತ್ಮ, ಹೃದಯ ಇತ್ಯಾದಿ ಇರೋ ಹಾಗೆ ದೇಹವೂ ಇದೆ, ಕಣ್ಣುಗಳಿವೆ, ಹಕ್ಕು ಇದೆ……”
”ಹಕ್ಕು…… ? ಏನು ಹಕ್ಕು?”
”ಬದುಕುವ ಹಕ್ಕು”
”ಹೆಂಡತಿ ಇಲ್ಲದೆ ಇಪ್ಪತ್ತು ವರುಷ ನಾನೂ ಬದುಕಿದ್ದೇನೆ,,,”
”ಮನುಷ್ಯರು ಯಂತ್ರಗಳಲ್ಲ. ನಾನು ಯಂತ್ರ ಅಲ್ಲ. ನಾನು ನೀವು ಅಲ್ಲ.”
”ಇಂತಹಾ ಮಾತು…..? ರಾಮ ಪಂಡಿತರೇ, ಇವಳ ಕೇಶಮುಂಡನ ಮಾಡಿಸಿ ಅಥವಾ ಊರು ಬಿಡಿಸಿ”
”ಕೇಶದೊಂದಿಗೆ ತಲೆಯನ್ನೂ ಕೊಯಿದು ಬಿಡಿ”
ವಾದ ಹೀಗೇ ಬೆಳೆಯುತ್ತದ್ದಂತೆ ತಂತ್ರಿಗಳು ಸಭೆ ಬಿಟ್ಟು ಎದ್ದುಬಿಟ್ಟರು. ದೇವಕಿ ಲಜ್ಜೆ ಇಲ್ಲದವಳ ಹಾಗೆ ಗುಂಪನ್ನು ನೋಡಿದಳು. ದೃಷ್ಡಿಭೋಗದಲ್ಲಿ ನಿರತವಾಗಿದ್ದ; ಪ್ರಕಟವಾಗಿ ಅವಳ ಹಕ್ಕುಗಳನ್ನು ನಿರಾಕರಿಸುತ್ತಿದ್ದ; ಹಲವು ಜೊತೆ ಕಣ್ಣುಗಳು ನೆಲ ನೋಡಿದುವು. ತುಸು ದೂರದಲ್ಲಿ ನಿಂತು ಇದೆಲ್ಲಾ ಗಮನಿಸುತ್ತಿದ್ದ ಇತರ ಜಾತಿಯ ಗುಂಪು ಬ್ರಾಮ್ಹಣರಿಗೆ ಹುಚ್ಚು ಎಂದು ತಮ್ಮ ತಮ್ಮ ತಮ್ಮಲ್ಲೇ ಆಡಿಕೊಂಡು ನಕ್ಕವು. ರಾಮ ಪಂಡಿತರು ನಡಿ ಮಾರಿ – ನೀನು ರಾಕ್ಷಸಿ ಎಂದು ಗರ್ಜಿಸಿದರು. ಈ ಗರ್ಜನೆಯಲ್ಲಿ ಧ್ವನಿ – ಶಕ್ತಿ ಮಾತ್ರ ಇರಲಿಲ್ಲ.
ಈ ವಿಚಾರಣೆ ಮುಗಿದ ಮೇಲೆ ಬಹಳ ದಿನ ದೇವಕಿ ಹೊರಗೆಲ್ಲೂ ಕಾಣಿಸಲಿಲ್ಲ. ಹುಚ್ಚು ಹೆಂಗಸು…… ಕಾಮಭ್ರಾಂತು ಎಂದು ಜನರು ಆಡಿಕೊಳ್ಳಲಾರಂಭಿಸಿದರು. ದುರ್ಗಾನಿಲಯದ ಕೋಣೆಯೊಂದರಿಂದ ರಾತ್ರಿಯ ಯಾವುದಾದರೊಂದು ಸಮಯದಲ್ಲಿ ಕರುಳು ಕೊಯ್ಯುವ ಹೆಂಗರುಳಿನ ಅಳು ಧ್ವನಿಯೊಂದು ಕೇಳಿಸುತ್ತಿತ್ತು. ಈ ವಿಚಾರಣೆ ಕಳೆದ ಎಂಟನೇ ತಿಂಗಳಿನಲ್ಲಿ ಕಪ್ಪೆ ಹೊಂಡದಲ್ಲಿ ನಾನು ಹೇಳಿದ ನವಜಾತ ಶಿಶುವಿನ ಶವ ಕಾಣಿಸಿಕೊಂಡದ್ದು. ಆ ಶವ ಕಂಡು ಬಂದು ನಾಲ್ಕನೇ ದಿನ ದುರ್ಗಾನಿಲಯದ ಅಂಗಳದಲ್ಲಿ ಹೊಸ ಮಡಿಕೆ, ಚಟ್ಟ, ನೀರಿನ ಮಡಿಕೆ ಎಲ್ಲಾ ಕಾಣಿಸಿಕೊಂಡು ತುಸು ಹೊತ್ತಿನಲ್ಲೇ ಹೆಂಗಸಿನ ಶವವೊಂದು ಶ್ಮಶಾನಕ್ಕೆ ಒಯ್ಯಲ್ಪಟ್ಟಿತು. ಹೌದು ದೇವಕಿ ತೀರಿಕೊಂಡಿದ್ದಳು.
ಕತೆ ಕೇಳಿ ಮನಸ್ಸು ಭಾರವಾಯಿತೇನೋ ನಿಮಗೆ…. ? ಎಲ್ಲಾ ಊರುಗಳಲ್ಲೂ ಕಾಮದ ಪ್ರಬಲ ಕತೆಯೊಂದು ನಡೆದಿರುತ್ತದೆ. ಅದರ ಹಸಿ ಹಸಿ ವಿವರಗಳು ಜನಜೀವನದ ಎಲ್ಲಾ ಮುಖಗಳಿಗೂ ಚಾಲನೆ ಕೊಡುತ್ತದೆ. ಕಾಮವೊಂದಿಲ್ಲದಿರುತ್ತಿದ್ದರೆ ಈ ಜಗತ್ತಿನಲ್ಲಿ ಧರ್ಮಗಳೂ – ದೇವರುಗಳೂ ನೀತಿಗಳೂ ಯಾವುದೂ ಇರುತ್ತಿರಲಿಲ್ಲ. ಸಮುದ್ರ ಗರ್ಭದಲ್ಲಿ ನದಿಗಳ ಗುಪ್ತ ಪ್ರವಾಹವಿರುವಂತೆ, ಸಮಾಜ ಜೀವನದ, ಸಮೂಹ ಜೀವನದ ಶಾಂತ ಅಶಾಂತ ಗರ್ಭದಲ್ಲೂ ಕಾಮ ಹೀಗೆ ಪ್ರವಹಿಸುತ್ತಿರುತ್ತದೆ. ಜನ್ಮಸ್ಥಾನಕ್ಕೆ ಎಲ್ಲೆಲ್ಲೋ ಸಂಚಾರ ಮುಗಿಸಿ ಮರಳುವ ಸಾಲೊಮನ್ ಮೀನುಗಳಂತೆ ಮನುಷ್ಯ ಮತ್ತೆ ಮತ್ತೆ ಸೃಷ್ಟಿ ಮೂಲಕ್ಕೆ ಮರಳುತ್ತಾನೆ. ನೀತಿ ಅನೀತಿ, ಶೀಲ ಅಶ್ಲೀಲ ಇತ್ಯಾದಿ ಇತ್ಯಾದಿಗಳ ಗಮನವಿಲ್ಲದೆ ಊರು ಊರುಗಳಲ್ಲಿ ನಡೆಯತ್ತಿರೋ ಜೀವಿತದ ಮೂಲ ಕ್ರಿಯೆ ಇದು.
ಗಾಬರಿಯಾಗಿದಿರಾ…. ..? ನಿಜ ಜೀವಿತ ಇಷ್ಟು ಸರಳವಾಗಿರೋದಿಲ್ಲ. ಗಣಿತದ ಕೂಡಿಸು – ಕಳೆ ಚಿಹ್ನೆಗಳಲ್ಲಿ ಜೀವಿಸುತ್ತಿರೋ ಮನುಷ್ಯ ನಿಮಿಷ ನಿಮಿಷಗಳನ್ನು ಜೀವಿತಕ್ಕೆ ಕೂಡಿಸುತ್ತೇನೆ ಎಂದುಕೊಳ್ಳುತ್ತಾನೆ. ಆದರೆ ಅದೇ ಕ್ಷಣದಲ್ಲಿ ವಾಸ್ತವವಾಗಿ ಆತ ನಿಮಿಷ ನಿಮಿಷಗಳನ್ನು ಕಳೆಯುತ್ತಿರುತ್ತಾನೆ. ಕತೆ ಹೇಳುತ್ತೇನೆ ಎಂದಿದ್ದೆ. ಆದ್ರೆ ಇದು ಕತೆಯಲ್ಲ. ಶವವಾಗಿ ನಾಲ್ಕು ಮಂದಿ ಹೊರಲ್ಪಡುವ ಮುನ್ನ ಮನುಷ್ಯ ತನ್ನ ಶವವನ್ನೇ ಸ್ಚಲ್ಪ ಕಾಲ ಹೊರಲೇ ಬೇಕಾಗುತ್ತದೆ. ಬಹುಶ: ಈ ಕಾಲಘಟ್ಟದಲ್ಲಿ ಈ ಪ್ರಪಂಚದ ನಾಗರಿಕತೆ ತನ್ನ ಶವನ್ನು ತಾನೇ ಹೊತ್ತುಕೊಂಡಿದೆ…… ಅಲ್ಲ…..? ಇರಲಿ ಬಿಡಿ….. ಇನ್ನೊಮ್ಮೆ ಈ ದಾರಿಯಾಗಿ ಬನ್ನಿ ಆಗಲೂ ಶವಸಂಸ್ಕಾರದ ಸಿದ್ಧತೆ ಈ ಭೂ ಭಾಗದಲ್ಲಿ ಇನ್ನೂ ನಡೆದಿರುತ್ತದೆ. ಯುಗ ಯುಗಗಳು ದಾಟಿ ಹೋದ ಮೇಲೂ……